ಕೋಝಿಕ್ಕೋಡ್ : ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಪಿ. ಉನ್ನಿಕೃಷ್ಣನ್ (89) ಅವರು ನಿಧನರಾಗಿದ್ದಾರೆ. ಕೋಝಿಕ್ಕೋಡ್’ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದರು. ಅವರು ಒಬ್ಬ ಅತ್ಯುತ್ತಮ ವಾಗ್ಮಿ, ಪತ್ರಕರ್ತ ಮತ್ತು ರಾಜತಾಂತ್ರಿಕರಾಗಿದ್ದರು. ಕೇರಳದ ವಟಕರಾ ಲೋಕಸಭಾ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದ ಹೆಗ್ಗಳಿಕೆ ಇವರದ್ದಾಗಿದೆ.
ಕೆ.ಪಿ. ಉನ್ನಿಕೃಷ್ಣನ್ 1971 ರಿಂದ 1991 ರವರೆಗೆ ಸತತ ಆರು ಬಾರಿ ವಟಕರಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.1989-90ರ ಅವಧಿಯಲ್ಲಿ ವಿ.ಪಿ. ಸಿಂಗ್ ಅವರ ಸಂಪುಟದಲ್ಲಿ ಮೇಲ್ಮೈ ಸಾರಿಗೆ ಮತ್ತು ಸಂವಹನ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಅವರು ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರತಿನಿಧಿಯಾಗಿ ಮಿಂಚಿದ್ದರು.ಕೆ.ಪಿ. ಉನ್ನಿಕೃಷ್ಣನ್ ಅವರ ನಿಧನಕ್ಕೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ವೈಯಕ್ತಿಕ ಮತ್ತು ವೃತ್ತಿಜೀವನ
ಕೊಯಿಲಾಂಡಿಯ ವಕೀಲರಾದ ಕುಂಜಿಕಣ್ಣನ್ ನಾಯರ್ ಅವರ ಪುತ್ರನಾಗಿ ಜನಿಸಿದ ಇವರು, ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜು ಮತ್ತು ಲಾ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಇವರು ‘ಬ್ಲಿಟ್ಜ್’ (Blitz), ಶಂಕರ್ಸ್ ವೀಕ್ಲಿ, ಟೈಮ್ಸ್ ಆಫ್ ಇಂಡಿಯಾ ಮತ್ತು ಮಾತೃಭೂಮಿಯಂತಹ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು.
ರಾಜಕೀಯ ಪಯಣ
• ಸೋಶಿಯಲಿಸ್ಟ್ ಚಳವಳಿಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದ ಇವರು 1960 ರಲ್ಲಿ ಕಾಂಗ್ರೆಸ್ ಸೇರಿದರು.
• ಇವರು ವಿ.ಕೆ. ಕೃಷ್ಣ ಮೆನನ್ ಅವರ ಆಪ್ತ ಅನುಯಾಯಿ ಮತ್ತು ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರ ಪರಮ ಆಪ್ತರಾಗಿದ್ದರು.
• ನಂತರದ ದಿನಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್ (ಯು) ಮತ್ತು ಕಾಂಗ್ರೆಸ್ (ಎಸ್) ಪಕ್ಷಗಳಲ್ಲಿ ಗುರುತಿಸಿಕೊಂಡರು. ಕಾಂಗ್ರೆಸ್ (ಎಸ್) ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.
• 1995 ರಲ್ಲಿ ಮತ್ತೆ ಮಾತೃಸಂಸ್ಥೆಯಾದ ಕಾಂಗ್ರೆಸ್‘ಗೆ ಮರಳಿದರು.

