ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಕಾವು ಏರುತ್ತಿದೆ. ರಾಜ್ಯದ 234 ಸ್ಥಾನಗಳಿಗೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಘೋಷಣೆ ಮಾಡುವುದು ಬಾಕಿ ಇದೆ.
ಚುನಾವಣೆ ಹಿನ್ನಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ದೆಹಲಿಗೆ ಭೇಟಿ ನೀಡಿದ್ದರು. ಅವರು ಕೇಂದ್ರ ಗೃಹ ಸಚಿವ, ಬಿಜೆಒಇಯ ಹಿರಿಯ ನಾಯಕ ಅಮಿತ್ ಶಾ ಭೇಟಿ ಮಾಡಿದ್ದಾರೆ.
ಎಐಎಡಿಎಂಕೆ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದೆ. ಎಐಎಡಿಎಂಕೆ ನಾಯಕ ಪನ್ನೀರ್ ಸೆಲ್ವಂ ಡಿಎಂಕೆ ಸೇರಿದ ಮೇಲೆ ಮತ್ತು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಕೆ.ಶಶಿಕಲಾ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ ಮೇಲೆ ಈ ಭೇಟಿ ನಡೆದಿದೆ.
“ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಚುನಾವಣೆಯನ್ನು ಎದುರಿಸುವುದು ಹೇಗೆ?” ಎಂದು ಚರ್ಚೆ ಮಾಡಲಾಗಿದೆ ಎಂದು ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ. ವಿ.ಕೆ.ಶಶಿಕಲಾ ಅವರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟಕ್ಕೆ ಇನ್ನಷ್ಟು ಪಕ್ಷಗಳು ಸೇರಲು ಬಯಸಿವೆ. ಈ ಕುರಿತು ಚರ್ಚೆ ನಡೆಸಲಾಗಿದೆ” ಎಂದು ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ. ಆದರೆ ಸೀಟು ಹಂಚಿಕೆ ಕುರಿತು ದೆಹಲಿಯಲ್ಲಿ ಯಾವುದೇ ತೀರ್ಮಾನವನ್ನು ಮಾಡಿಲ್ಲ.
“ಸೋಮವಾರ ರಾತ್ರಿಯ ಸಭೆಯಲ್ಲಿ ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದೆವು. ಮುಂಬರುವ ಚುನಾವಣೆಗಳಲ್ಲಿ ನಾವು ಹೇಗೆ ಮುಂದುವರಿಯಬೇಕು? ಎಂಬುದರ ಬಗ್ಗೆಯೂ ಮಾತನಾಡಿದೆವು. ಮೈತ್ರಿ ಮಾಡಿಕೊಳ್ಳುವ ಕುರಿತು ನಾವು ಕೆಲವು ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ಅವರು ನಮ್ಮ ಮೈತ್ರಿಕೂಟಕ್ಕೆ ಸೇರುವ ಸಾಧ್ಯತೆಯಿದೆ” ಎಂದರು.
ಭಾನುವಾರ ಕೆಲವು ವರದಿಗಳು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸುಮಾರು 210 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ತಿಳಿಸಿದ್ದವು. ಈ ವರದಿಗಳು ಬಂದ ಬಳಿಕ ದೆಹಲಿಯಲ್ಲಿ ಮಹತ್ವದ ಸಭೆ ನಡೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಪಳನಿಸ್ವಾಮಿ ಡಿಎಂಕೆ ಸರ್ಕಾರವನ್ನು ಜನವಿರೋಧಿ ಸರ್ಕಾರ ಎಂದು ಟೀಕಿಸಿದ್ದು, ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ತಮ್ಮ ಮೈತ್ರಿಕೂಟದ ಗುರಿ ಎಂದು ಘೋಷಣೆ ಮಾಡಿದ್ದಾರೆ.
ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದ ನಂತರ ಎಐಎಡಿಎಂಕೆ ಸರ್ಕಾರ ರಚಿಸಲಿದೆ ಎಂದು ಪಕ್ಷದ ನಾಯಕರು ಉತ್ಸಾಹದಲ್ಲಿದ್ದು, ಆಡಳಿತ ವಿರೋಧಿ ಅಲೆ ಇರುವ ಕಾರಣಕ್ಕೆ ಡಿಎಂಕೆ ಚುನಾವಣೆಯಲ್ಲಿ ಸೋಲು ಕಾಣಲಿದೆ ಎಂದು ಹೇಳುತ್ತಿದ್ದಾರೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 133 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 18, ಪಿಎಮ್‌ಕೆ 5, ವಿಸಿಕೆ 4 ಮತ್ತು ಇತರರು 8 ಸ್ಥಾನಗಳನ್ನು ಗೆದ್ದುಕೊಂಡಿದ್ದರು. ಕಾಂಗ್ರೆಸ್ ಅನ್ನು ಒಳಗೊಂಡಿದ್ದ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ), ಒಟ್ಟಾರೆಯಾಗಿ 159 ಸ್ಥಾನಗಳನ್ನು ಗೆದ್ದಿತ್ತು.
ಎನ್‌ಡಿಎ ಮೈತ್ರಿಕೂಟ 75 ಸ್ಥಾನಗಳನ್ನು ಗೆದ್ದಿತ್ತು. ಅದರಲ್ಲಿ ಎಐಎಡಿಎಂಕೆ 66 ಸ್ಥಾನಗಳೊಂದಿಗೆ ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಬಾರಿ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರ ಹಿಡಿಯುವ ಉತ್ಸಾಹದಲ್ಲಿ ಪಕ್ಷದ ನಾಯಕರು ಇದ್ದಾರೆ.

