ಉಡುಪಿ: ನಿಂತಿದ್ದ ಕಂಟೈನರ್ ಗೆ ಕಾರ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾವುಂದ ಬಳಿ ನಡೆದಿದೆ. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಮಮತಾ(36) ಮತ್ತು ಅವರ ಪುತ್ರಿ ಧೃತಿಕಾ(14) ಮೃತಪಟ್ಟವರು. ಪತಿ ರಾಘು(40), ಮಕ್ಕಳಾದ ಜಾಹ್ನವಿ(12), ಚಾರ್ವಿ(10) ಮತ್ತು ಕಾರ್ ಚಾಲಕ ಕಿರಣ್ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದ ಇವರು, ಮುರ್ಡೇಶ್ವರ ಮತ್ತು ಗೋಕರ್ಣ ಕ್ಷೇತ್ರಗಳಿಗೆ ತೆರಳಲು ಬೈಂದೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆ ನಿಂತಿದ್ದ ಕಂಟೈನರ್ ಗೆ ಕಾರ್ ಡಿಕ್ಕಿ ಹೊಡೆದಿದೆ. ಗಾಯಾಳು ತಂದೆ ಮತ್ತು ಇಬ್ಬರು ಮಕ್ಕಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ ಚಾಲಕ ಕಿರಣ್ ನನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

