ನವದೆಹಲಿ: ಕೇಂದ್ರ ಸರ್ಕಾರ 10,900 ಕೋಟಿ ರೂಪಾಯಿ ವೆಚ್ಚದ ಪಿಎಂ ಇ- ಡ್ರೈವ್ ಯೋಜನೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಹೊಸ ಗಡುವು ಮತ್ತು ಮಿತಿ ನಿಗದಿಪಡಿಸಲಾಗಿದೆ. 2026ರ ಜುಲೈ 31 ರೊಳಗೆ ನೋಂದಣಿಯಾಗುವ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ಮತ್ತು 2028ರ ಮಾರ್ಚ್ 31ರೊಳಗೆ ನೋಂದಣಿಯಾಗುವ ಇ-ರಿಕ್ಷಾಗಳು ಮಾತ್ರ ಪ್ರೋತ್ಸಾಹಧನ ಪಡೆಯಲು ಅರ್ಹವಾಗಿರುತ್ತವೆ. ಸಬ್ಸಿಡಿ ಪಡೆಯಲು ದ್ವಿಚಕ್ರ ವಾಹನಗಳ ಬೆಲೆ 1.5 ಲಕ್ಷ ರೂ., ತ್ರಿಚಕ್ರವಾಹನಗಳ ಬೆಲೆ 2.5 ಲಕ್ಷ ರೂಪಾಯಿ ಮಿತಿಯೊಳಗಿರಬೇಕು.
ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಲ್ಲಿ ಸರ್ಕಾರ ಕೆಲವು ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಯೋಜನೆ ಅಡಿ ಪ್ರೋತ್ಸಾಹ ಧನ ಪಡೆಯಲು ನಿರ್ದಿಷ್ಟ ದಿನಾಂಕ ನಿಗದಿಪಡಿಸಿದ್ದು, ಆ ದಿನಾಂಕದೊಳಗೆ ನೋಂದಣಿಯಾದ ವಾಹನಗಳಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ. ಈ ಯೋಜನೆಗೆ ಸರ್ಕಾರ 10,900 ಕೋಟಿ ಮೀಸಲಿಟ್ಟಿದ್ದು, ಈ ಹಣ ಮುಗಿದರೆ ಯೋಜನೆ ನಿಲ್ಲುತ್ತದೆ ಎಂದು ಹೇಳಲಾಗಿದೆ.

