ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ.ರವಿಶಂಕರ್ ಗುಲಾಬಿ ಮಾರ್ಗದ ರೀಚ್–6ರ ಎಲಿವೇಟೆಡ್ ವಿಭಾಗ ಪರಿಶೀಲನೆ ಮಾಡಿದರು. ಕಾಳೇನ ಅಗ್ರಹಾರ- ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗದಲ್ಲಿ ಮೊದಲ ಹಂತವಾಗಿ ಎತ್ತರಿಸಿದ ಮಾರ್ಗದಲ್ಲಿ ಮಾತ್ರ 2026ರ ಮೇನಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಎಂಡಿ ಭೇಟಿ ನೀಡಿದ ಕುರಿತು ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ವ್ಯವಸ್ಥಾಪಕ ನಿರ್ದೇಶಕರು ಗುಲಾಬಿ ಮಾರ್ಗದ ರೀಚ್-6ರ ಎಲಿವೇಟೆಡ್ ವಿಭಾಗ ಪರಿಶೀಲನೆ ಮಾಡಿದರು ಎಂದು ಹೇಳಿದೆ.
ಡಾ. ಜೆ. ರವಿಶಂಕರ್ ಫೆಬ್ರವರಿ 25ರಂದು ನಮ್ಮ ಮೆಟ್ರೋ ಯೋಜನೆಯ ಹಂತ-2ರ ಗುಲಾಬಿ ಮಾರ್ಗದ ರೀಚ್-6ರ ಎಲಿವೇಟೆಡ್ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ವ್ಯವಸ್ಥಾಪಕ ನಿರ್ದೇಶಕರು ಕಾಮಗಾರಿಗಳ ಪ್ರಗತಿ, ಭದ್ರತಾ ನಿಯಮಾವಳಿಗಳ ಅನುಸರಣೆ, ಇಂಜಿನಿಯರಿಂಗ್ ಮಾನದಂಡಗಳು, ಗುಣಮಟ್ಟದ ಪ್ರಕ್ರಿಯೆ ಹಾಗೂ ಯೋಜನೆಯ ಸಿದ್ಧತೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಸಮಗ್ರ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಿವಿಲ್ ಕಾಮಗಾರಿಗಳು, ನಿಲ್ದಾಣಗಳ ಅಭಿವೃದ್ಧಿ, ವಯಾಡಕ್ಟ್ ನಿರ್ಮಾಣ, ಸಿಸ್ಟಮ್ ಅಳವಡಿಕೆ ಹಾಗೂ ಸಂಬಂಧಿತ ಮೂಲಸೌಕರ್ಯ ಅಂಶಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು.
ವ್ಯವಸ್ಥಾಪಕ ನಿರ್ದೇಶಕರು ಪರಿಶೀಲನಾ ಭೇಟಿಯ ವೇಳೆ, ಯೋಜನಾ ಅಧಿಕಾರಿಗಳು, ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರೊಂದಿಗೆ ಸಂವಾದ ನಡೆಸಿ, ಸಾಧಿಸಿರುವ ಮೈಲುಗಲ್ಲುಗಳ ಪರಿಶೀಲನೆ ಹಾಗೂ ಅನುಷ್ಠಾನ ಹಂತದಲ್ಲಿ ಎದುರಾಗುತ್ತಿರುವ ಸವಾಲುಗಳ ಕುರಿತು ಚರ್ಚಿಸಿದರು.
ನಿರ್ಮಾಣದ ಪ್ರತಿ ಹಂತದಲ್ಲೂ ಅತ್ಯುನ್ನತ ಭದ್ರತಾ ಮಾನದಂಡಗಳನ್ನು ಪಾಲಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸುವುದು ಹಾಗೂ ಗುಣಮಟ್ಟದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವೆಂದು ಹೇಳಿದರು.
ಗುಲಾಬಿ ಮಾರ್ಗದ ರೀಚ್-6ರ ಎಲಿವೇಟೆಡ್ ವಿಭಾಗದ ಕಾರ್ಯಾರಂಭವು ನಿರ್ಮಾಣ ಹಂತದಲ್ಲಿರುವ ಕಾರಿಡಾರ್‌ಗಳನ್ನು ಹಂತ ಹಂತವಾಗಿ ಸಾರ್ವಜನಿಕ ಸೇವೆಗೆ ತೆರೆಯುವ ಪ್ರಕ್ರಿಯೆಗೆ ಪ್ರಥಮ ಹೆಜ್ಜೆಯಾಗಲಿದೆ.
ಕಾರ್ಯಾರಂಭವಾದ ಬಳಿಕ, ಈ ಮಾರ್ಗವು ಬೆಂಗಳೂರು ನಗರದ ಪ್ರಮುಖ ಮಾರ್ಗಗಳಲ್ಲಿ ನಗರ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ವಾಹನ ದಟ್ಟಣೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ.
ಗುಲಾಬಿ ಮಾರ್ಗದ ವಿವರ: ಈಗಾಗಲೇ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಸಂಚಾರ ನಡೆಸುವ ರೈಲುಗಳ ಮಾದರಿಯನ್ನು ಅನಾವರಣ ಮಾಡಲಾಗಿದೆ. ನೀಲಿ ಮತ್ತು ಗುಲಾಬಿ ಮಾರ್ಗದಲ್ಲಿ ಸಂಚಾರ ನಡೆಸುವ 57 ಚಾಲಕ ರಹಿತ ರೈಲುಗಳನ್ನು ಪೂರೈಕೆ ಮಾಡಲು ಬಿಇಎಂಎಲ್ ಜೊತೆ ಬಿಎಂಆರ್‌ಸಿಎಲ್ ಒಪ್ಪಂದ ಮಾಡಿಕೊಂಡಿದೆ.
ಗುಲಾಬಿ ಮಾರ್ಗ 21.26 ಕಿ.ಮೀ. ಉದ್ದವಿದೆ. ಇದನ್ನು ಎರಡು ಹಂತದಲ್ಲಿ ಲೋಕಾರ್ಪಣೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಮೊದಲ ಹಂತದಲ್ಲಿ ಕಾಳೇನ ಅಗ್ರಹಾರ-ತಾವರೆಕೆರೆ ನಡುವಿನ ಎತ್ತರಿಸಿದ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಇದು 7.5 ಕಿ.ಮೀ. ನಮ್ಮ ಮೆಟ್ರೋ ಮಾರ್ಗವಾಗಿದೆ.
ಡೈರಿ ಸರ್ಕಲ್‌ನಿಂದ ನಾಗವಾರ ತನಕ 13.76 ಕಿ.ಮೀ. ಸುರಂಗ ಮಾರ್ಗದಲ್ಲಿ ರೈಲು ಸಂಚಾರವನ್ನು ನಡೆಸಲಿದೆ. 16 ರೈಲುಗಳನ್ನು ಈ ಮಾರ್ಗದಲ್ಲಿ ಓಡಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ.

