ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತಮ್ಮ 70ನೇ ವಯಸ್ಸಿನಲ್ಲೂ ಬೆಂಗಳೂರಿನಿಂದ ಸುಮಾರು 655 ಕಿಲೋ ಮೀಟರ್ ದೂರದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ನಡೆಸಿದ್ದಾರೆ. ಅವರಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಗುರುವಾರ ದೂರವಾಣಿ ಮೂಲಕ ಸುರೇಶ್ ಕುಮಾರ್ ಅವರನ್ನು ಸಂಪರ್ಕಿಸಿದ ಪ್ರಧಾನಿ ಮೋದಿ ಸೈಕಲ್ ಯಾತ್ರೆಯ ಅನುಭವ, ಮಾಹಿತಿ ಪಡೆದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸುರೇಶ್ ಕುಮಾರ್ ಅವರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸುರೇಶ್ ಕುಮಾರ್, ಅತ್ಯಂತ ಸಂತಸದ ಸಂಗತಿ. ಮೋದಿ ಅವರು ಇದೀಗ (ರಾತ್ರಿ 8.23 ಗಂಟೆಗೆ)ನನಗೆ ಖುದ್ದಾಗಿ ಫೋನ್ ಮಾಡಿ ನಾನು ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಮಾಡಿದ್ದಕ್ಕೆ ಅಭಿನಂದಿಸಿ ನನಗೆ ಸ್ಪೂರ್ತಿ ನೀಡಿದರು. 51 ವರ್ಷಗಳ ನಂತರ ಮತ್ತೊಮ್ಮೆ ವಿವೇಕಾನಂದ ಶಿಲಾ ಸ್ಮಾರಕ ಕ್ಕೆ ನನ್ನ ಸ್ನೇಹಿತರ ಜೊತೆ ಸೈಕಲ್ ಸವಾರಿ ಮಾಡಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 2025 ರಲ್ಲಿ ನಮ್ಮ ತಂಡ 8,000 ಕಿಮೀ ದೂರದಷ್ಟು ಸೈಕ್ಲಿಂಗ್ ಮಾಡಿರುವ ಮಾಹಿತಿ ಪಡೆದು ತಮ್ಮ ಅಚ್ಚರಿ ಮತ್ತು ಸಂತಸ ಎರಡನ್ನೂ ವ್ಯಕ್ತಪಡಿಸಿದರು. ಅದರಲ್ಲೂ ತೀವ್ರ ಅನಾರೋಗ್ಯದ ನಂತರ ನಾನು ಈ ಕಾರ್ಯ ಕೈಗೊಂಡ ಬಗ್ಗೆ ಪ್ರಧಾನ ಮಂತ್ರಿಗಳು ನನ್ನ ಬೆನ್ನು ತಟ್ಟಿದ್ದು ನನ್ನ ಸುಕೃತ ಎಂದು ತಿಳಿಸಿದ್ದಾರೆ.

