ಬೆಂಗಳೂರು: ನಟ ದರ್ಶನ್ ಅವರ ಆಪ್ತೆ ಹಾಗೂ ರೇಣುಕಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ಅವರಿಗೆ ಈಗ ಜೈಲಿನ ಊಟವೇ ಗತಿಯಾಗಿದೆ. ಈ ಹಿಂದೆ ಕೆಳಹಂತದ ನ್ಯಾಯಾಲಯ ನೀಡಿದ್ದ ‘ಮನೆಯೂಟ’ದ ಸೌಲಭ್ಯವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಏನಿದು ಪ್ರಕರಣ ? ಬೆಂಗಳೂರಿನ 57ನೇ ಸಿಸಿಹೆಚ್ (CCH) ನ್ಯಾಯಾಲಯವು ಆರೋಪಿಗಳಾದ ಪವಿತ್ರಾ ಗೌಡ, ಲಕ್ಷ್ಮಣ್ ಮತ್ತು ನಾಗರಾಜ್ ಅವರಿಗೆ ಜೈಲಿನಲ್ಲಿ ಮನೆಯೂಟ ಸೇವಿಸಲು ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮತ್ತು ಕಾರಾಗೃಹ ಇಲಾಖೆಯು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.
ಹೈಕೋರ್ಟ್ ನೀಡಿದ ಸ್ಪಷ್ಟನೆ: ಜಸ್ಟಿಸ್ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ಕೆಳಹಂತದ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿತು. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ.
“ಯಾವುದೇ ಕೈದಿಗೆ ಮನೆಯೂಟ ನೀಡಬೇಕಾದರೆ ಬಲವಾದ ವೈದ್ಯಕೀಯ ಕಾರಣಗಳು ಇರಲೇಬೇಕು. ವೈದ್ಯಕೀಯ ಸಲಹೆ ಇಲ್ಲದೆ ಸುಖಾಸುಮ್ಮನೆ ಮನೆಯೂಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ,” ಎಂದು ಪೀಠ ಸ್ಪಷ್ಟಪಡಿಸಿದೆ.
ನಿಯಮ ಎಲ್ಲರಿಗೂ ಒಂದೇ : ಜೈಲು ಹಕ್ಕಿಗಳು ಎನ್ನಿಸಿಕೊಂಡ ಮೇಲೆ ಜೈಲಿನ ನಿಯಮಗಳಿಗೆ ಬದ್ಧರಾಗಿರಬೇಕು. ವಿಶೇಷ ಸೌಲಭ್ಯಗಳನ್ನು ನೀಡಲು ಕಾನೂನಿನಲ್ಲಿ ಮಿತಿಗಳಿವೆ ಎಂಬುದನ್ನು ನ್ಯಾಯಾಲಯ ಎತ್ತಿ ತೋರಿಸಿದೆ. ಈ ಆದೇಶದಿಂದಾಗಿ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಮನೆಯಿಂದ ಬರುತ್ತಿದ್ದ ಊಟ ಇನ್ನು ಮುಂದೆ ಸ್ಥಗಿತಗೊಳ್ಳಲಿದೆ. ಇವರು ಕೂಡ ಇತರ ಸಾಮಾನ್ಯ ಕೈದಿಗಳಂತೆ ಜೈಲಿನಲ್ಲೇ ಸಿದ್ಧವಾಗುವ ಆಹಾರವನ್ನೇ ಸೇವಿಸಬೇಕಾಗುತ್ತದೆ.

