ರಾಯಚೂರು : ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಲು ಬಾರದವರನ್ನು ಗುರಿಯಾಗಿಸಿಕೊಂಡು ವಂಚಿಸುವ ಜಾಲವೊಂದು ಸಕ್ರಿಯವಾಗಿದ್ದು, ರಾಯಚೂರಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಸಹಾಯ ಮಾಡುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಮುಗ್ಧ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 60 ಸಾವಿರ ರೂಪಾಯಿ ವಂಚಿಸಿ ಪರಾರಿಯಾಗಿದ್ದಾನೆ.
ಏನಿದು ಘಟನೆ
ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ನಿವಾಸಿಯೊಬ್ಬರು ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಎಟಿಎಂ ಬಳಕೆ ಬಗ್ಗೆ ಅಷ್ಟು ಪರಿಚಯವಿಲ್ಲದ್ದನ್ನು ಗಮನಿಸಿದ ಅಪರಿಚಿತ ವ್ಯಕ್ತಿಯೊಬ್ಬ, “ನಾನು ನಿಮಗೆ ಹಣ ತೆಗೆದುಕೊಡುತ್ತೇನೆ” ಎಂದು ಸಹಾಯ ಮಾಡಲು ಮುಂದೆ ಬಂದಿದ್ದಾನೆ.
ಸಹಾಯದ ನೆಪದಲ್ಲಿ ವ್ಯಕ್ತಿಯ ಎಟಿಎಂ ಕಾರ್ಡ್ ಪಡೆದ ವಂಚಕ, ಪಿನ್ ನಂಬರ್ ತಿಳಿದುಕೊಂಡಿದ್ದಾನೆ. ಬಳಿಕ ಚಾಕಚಕ್ಯತೆಯಿಂದ ಅಸಲಿ ಕಾರ್ಡ್ ಅನ್ನು ತನ್ನ ಬಳಿ ಇಟ್ಟುಕೊಂಡು, ಮಾಲೀಕನಿಗೆ ನಕಲಿ ಅಥವಾ ಬೇರೊಂದು ಕೆಲಸ ಮಾಡದ ಕಾರ್ಡ್ ನೀಡಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.
ಸ್ವಲ್ಪ ಸಮಯದ ನಂತರ ಕಾರ್ಡ್ ಮಾಲೀಕನ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶಗಳು ಬರಲಾರಂಭಿಸಿವೆ. ಲಿಂಗಸುಗೂರು ಸೇರಿದಂತೆ ವಿವಿಧ ಎಟಿಎಂ ಕೇಂದ್ರಗಳಲ್ಲಿ ಹಂತ ಹಂತವಾಗಿ ಒಟ್ಟು 60 ಸಾವಿರ ರೂಪಾಯಿ ಹಣ ಡ್ರಾ ಆಗಿರುವುದು ತಿಳಿದುಬಂದಿದೆ. ಇದರಿಂದ ಗಾಬರಿಗೊಂಡ ಸಂತ್ರಸ್ತರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಟಿಎಂ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಎಟಿಎಂ ಕೇಂದ್ರಗಳಲ್ಲಿ ಅಪರಿಚಿತರ ಸಹಾಯ ಪಡೆಯಬೇಡಿ. ನಿಮ್ಮ ಪಿನ್ ನಂಬರ್ ಯಾರೊಂದಿಗೂ ಹಂಚಿಕೊಳ್ಳಬೇಡಿ. ಒಂದು ವೇಳೆ ಹಣ ಡ್ರಾ ಮಾಡಲು ಬರದಿದ್ದರೆ ಬ್ಯಾಂಕ್ ಸಿಬ್ಬಂದಿಯ ನೆರವು ಪಡೆಯುವುದು ಉತ್ತಮ ಎಂದು ಪೊಲೀಸರು ತಿಳಿಸಿದ್ದಾರೆ.

