ಬೆಂಗಳೂರು: ಲೋಕ ಅದಾಲತ್ ನಲ್ಲಿ ದೂರುದಾರ ವ್ಯಕ್ತಿ, ಉಭಯ ಪಕ್ಷಗಾರರ ಅನುಪಸ್ಥಿತಿಯಲ್ಲಿ ತೀರ್ಪು ಅಂಗೀಕರಿಸಲ್ಪಟ್ಟಿದ್ದರೆ ಅದು ಎಲ್ಲಾ ಕಾಲಕ್ಕೂ ಕಾನೂನು ಬದ್ಧವಾಗಿದೆ ಮತ್ತು ಸರಿ ಇದೆ ಎಂದು ಹೇಳಲಾಗದು ಎಂದು ಹೈಕೋರ್ಟ್ ಹೇಳಿದ್ದು, ಲೋಕ ಅದಾಲತ್ ತೀರ್ಪು ಪ್ರಶ್ನಾತೀತವಲ್ಲ ಎಂದು ಪುನರುಚ್ಚರಿಸಿದೆ.
ಮೋಟಾರ್ ವಾಹನ ಅಪಘಾತ ಪ್ರಕರಣವೊಂದರಲ್ಲಿ ಲೋಕ ಅದಾಲತ್ ತೀರ್ಪು ಪ್ರಶ್ನಿಸಿ ಹುಬ್ಬಳ್ಳಿಯ ಆನಂದನಗರದ ಬಡ ಕುಟುಂಬದ ಶೈಲಾ ಮತ್ತು ಮಗ ವಿಶಾಲ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಲೋಕ ಅದಾಲತ್ ನಲ್ಲಿ ನಮಗೆ ನೀಡಲಾಗಿದ್ದ ಪರಿಹಾರ ಮೊತ್ತ ಕಡಿಮೆ ಮಾಡಿರುವುದು ತಪ್ಪಾಗಿದೆ. ನಮ್ಮ ಪರ ವಾದ ಮಂಡಿಸಿದ ಹಿಂದಿನ ವಕೀಲರು ಮತ್ತು ವಿಮಾ ಕಂಪನಿಯ ನಡುವೆ ವ್ಯಾಜ್ಯ ಇತ್ಯರ್ಥವಾಗಿದೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಯಾವತ್ತೂ ಬಂದೇ ಇರಲಿಲ್ಲ. ಆದ್ದರಿಂದ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿರುವ ಲೋಕ ಅದಾಲತ್ ಆದೇಶ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಅರ್ಜಿದಾರರ ವಾದವನ್ನು ನ್ಯಾಯಪೀಠ ಮನ್ನಿಸಿ ಅರ್ಜಿ ದಾಖಲಿಸಿದ ದಿನದಿಂದ ಅರ್ಜಿದಾರರಿಗೆ ಪಾವತಿಯಾಗುವ ದಿನದವರೆಗೆ ವಾರ್ಷಿಕ ಶೇಕಡ 6ರ ಬಡ್ಡಿಯಂತೆ 9,18,600 ರೂ. ಪರಿಹಾರ ನೀಡಬೇಕು ಎಂಬ ನ್ಯಾಯಮಂಡಳಿ ಆದೇಶವನ್ನು ಎತ್ತಿ ಹಿಡಿದಿದೆ.
ಅರ್ಜಿದಾರರ ಪರ ಅವರ ವಕೀಲರು ಸಹಿ ಹಾಕಿದ್ದಾರೆ. ಒಂದು ವೇಳೆ ಈ ರಿಟ್ ಅರ್ಜಿಯನ್ನು ಮನ್ನಿಸಿದರೆ ಅನಿರೀಕ್ಷಿತ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಪ್ರತಿವಾದಿ ವಿಮಾ ಕಂಪನಿ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಅರ್ಜಿದಾರರು ಜಂಟಿ ಮೆಮೋಗೆ ಸಹಿ ಹಾಕಿಲ್ಲ ಎಂಬುದು ಗಮನಾರ್ಹ ಅಂಶ ಎಂದು ಯೋಗ್ಯತೆಯ ಆಧಾರದ ಮೇಲೆ ಅರ್ಜಿದಾರರ ಮನವಿಯನ್ನು ಪರಿಗಣಿಸಿದೆ.
ಲೋಕ ಅದಾಲತ್ ನಲ್ಲಿ ಉಭಯ ಪಕ್ಷಗಾರರು ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅದಾಲತ್ ಹೊರಗೆ ಮಾಡಿಕೊಂಡ ಯಾವುದೇ ಒಪ್ಪಂದಕ್ಕೆ ಅವರು ಸಹಿ ಹಾಕುವುದಿಲ್ಲ ಎಂಬುದನ್ನು ಲೋಕ ಅದಾಲತ್ ಸದಸ್ಯರು ಖಚಿತಪಡಿಸಿಕೊಳ್ಳಬೇಕು ಎಂದು ಎಚ್ಚರಿಸಿದೆ.
ಉಭಯ ಪಕ್ಷಗಾರರು ಜಂಟಿ ಮೆಮೋಗೆ ಸಹಿ ಹಾಕಿ ಇತ್ಯರ್ಥಗೊಳಿಸಿದ ಮತ್ತು ಇಂತಹ ಪ್ರಕರಣವನ್ನು ಜಂಟಿ ಮೆಮೋ ಸಲ್ಲಿಕೆಯ ಮೂಲಕವೇ ಅದಾಲತ್ ಅಂಗೀಕರಿಸಿದ್ದರೆ ಮಾತ್ರ ಲೋಕ ಅದಾಲತ್ ತೀರ್ಪು ಕಾರ್ಯಗತಗೊಳ್ಳುತ್ತದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೇಳಿದ್ದಾರೆ.

