ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಕೊರತೆ ಹಿನ್ನೆಲೆ ಬರ ಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಕುರಿತಾಗಿ ಸ್ಥಳ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ನಿರ್ದೇಶನದಂತೆ, ರಾಜ್ಯದಲ್ಲಿ ಸತತ ಮೂರು ವಾರಗಳ ಕಾಲ ಮಳೆಯಾಗದೇ ಇರುವ ಹಾಗೂ ಶೇಕಡ 60ಕ್ಕಿಂತ ಕಡಿಮೆ ಮಳೆಯಾಗಿರುವ ಮತ್ತು ಸರ್ಕಾರ ನಿಗದಿಪಡಿಸಿರುವ ಇತರೆ ಮಾನದಂಡಗಳನ್ನು ಪೂರೈಸಲ್ಪಟ್ಟಿರುವ ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.
ಈ ಸಂಬಂಧ, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಒಂದು ವಾರದೊಳಗೆ ಸ್ಥಳ ಪರಿಶೀಲನೆ (Ground Truthing) ಪೂರ್ಣಗೊಳಿಸಿ, ಅಗತ್ಯ ಪ್ರಸ್ತಾವನೆ ಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸೂಚಿಸಿದ್ದಾರೆ.


