ಹುಬ್ಬಳ್ಳಿ: ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುವಾಗ ಮಹಿಳೆಯೊಬ್ಬರು ಯಂತ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ.
ಆಲಿಯಾ ಬೇಗಂ(50) ಮೃತಪಟ್ಟ ಮಹಿಳೆ. ಸ್ವಂತ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುವಾಗ ಆಲಿಯಾ ಬೇಗಂ ಧರಿಸಿದ್ದ ದುಪ್ಪಟ್ಟಾ ಯಂತ್ರದ ಬೆಲ್ಟ್ ಗೆ ಸಿಲುಕಿದ್ದು, ಆಲಿಯಾ ಅವರ ಕುತ್ತಿಗೆ ತುಂಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಟ್ಟಿನ ಗಿರಣಿಯಲ್ಲಿ ಆಲಿಯಾ ಕೆಲಸ ಮಾಡುವಾಗ ಆಕಸ್ಮಿಕವಾಗಿ ದುಪ್ಪಟ್ಟಾ ಯಂತ್ರದ ಬೆಲ್ಟ್ ಗೆ ಸಿಲುಕಿ ಕುತ್ತಿಗೆ ತುಂಡರಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆಗೆ ರವಾನಿಸಲಾಗಿದೆ. ಹುಬ್ಬಳ್ಳಿ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

