ಐಪಿಎಲ್ 2027ರ ಸೀಸನ್ಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯಡು ಮಹತ್ವದ ಹೇಳಿಕೆ ನೀಡಿದ್ದಾರೆ. 2024 ರಲ್ಲಿ ರೋಹಿತ್ ಶರ್ಮಾ ಅವರಿಂದ ನಾಯಕತ್ವ ವಹಿಸಿಕೊಂಡ ನಂತರ ಎದುರಿಸಿದ ತೀವ್ರ ಟೀಕೆಗಳಿಂದಾಗಿ ಹಾರ್ದಿಕ್ ಮುಂಬೈ ತಂಡದಲ್ಲಿ ತುಸು ಹಿಂಜರಿಕೆಗೆ ಒಳಗಾಗಿದ್ದರು ಎಂದು ರಾಯಡು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕ್ಬಜ್ ಸಂವಾದದಲ್ಲಿ ಮಾತನಾಡಿದ ರಾಯಡು, “ಮುಂಬೈ ಇಂಡಿಯನ್ಸ್ನಲ್ಲಿ ಹಾರ್ದಿಕ್ ಅವರನ್ನು ಎಲ್ಲರೂ ಮೂಲೆಗುಂಪು ಮಾಡಿದಂತೆ ಅಥವಾ ಅವರು ಒಂಟಿಯಾದಂತೆ ಅವರಿಗೆ ಭಾಸವಾಗಿತ್ತು ಅನಿಸುತ್ತದೆ. ಒಮ್ಮೆ ಡ್ರೆಸ್ಸಿಂಗ್ ರೂಮ್ನಲ್ಲಿ ಇಂತಹ ವಾತಾವರಣ ನಿರ್ಮಾಣವಾದಾಗ ಆಟಗಾರನಿಗೆ ಮುಕ್ತವಾಗಿ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಅನೇಕ ವಿಷಯಗಳು ಹಾರ್ದಿಕ್ ಪರವಾಗಿ ಇರಲಿಲ್ಲ” ಎಂದು ಹೇಳಿದ್ದಾರೆ.
ಮುಂಬೈ ತಂಡದಲ್ಲಿ ಹಾರ್ದಿಕ್ ಮುಂದುವರಿಯುವುದಾದರೆ ಅವರು ನಾಯಕತ್ವದ ಜವಾಬ್ದಾರಿಯಿಂದ ಮುಕ್ತರಾಗಿ ಕೇವಲ ಆಟಗಾರನಾಗಿ ಪಂದ್ಯ ಗೆಲ್ಲಿಸುವತ್ತ ಗಮನ ಹರಿಸುವುದು ಒಳಿತು ಎಂದು ರಾಯಡು ಸಲಹೆ ನೀಡಿದ್ದಾರೆ. ಒಂದು ವೇಳೆ ಅವರು ತಂಡದಿಂದ ಹೊರಬಂದರೆ ಮುಂದಿನ ಕನಿಷ್ಠ ಒಂದು ಸೀಸನ್ ನಾಯಕತ್ವ ವಹಿಸಿಕೊಳ್ಳಬಾರದು ಎಂದಿದ್ದಾರೆ.
ಪ್ರಸ್ತುತ ಹೊರಬಿದ್ದಿರುವ ವರದಿಗಳ ಪ್ರಕಾರ, ಐಪಿಎಲ್ 2027ರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಹಾರ್ದಿಕ್ ಪಾಂಡ್ಯ ಮತ್ತು ಬೌಲರ್ ಅರ್ಷ್ದೀಪ್ ಸಿಂಗ್ ನಡುವೆ ಆಟಗಾರರ ಅದಟ-ಬದಲಾವಣೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಅವರಿಗೆ ಪಂಜಾಬ್ ಕಿಂಗ್ಸ್ ಅಥವಾ ಸಿಎಸ್ಕೆ ಸೂಕ್ತವಾದ ವಾತಾವರಣ ನೀಡಬಲ್ಲವು ಎಂದು ರಾಯಡು ವಿಶ್ಲೇಷಿಸಿದ್ದಾರೆ.

