ಬೆಂಗಳೂರು: ರಾಜ್ಯದಲ್ಲಿ ಕೆರೆಗಳ ಒತ್ತುವರಿ ತೆರವು ಹಾಗೂ ಜಲಮೂಲಗಳ ಸಂರಕ್ಷಣೆಗೆ ಸರ್ಕಾರ ಮತ್ತಷ್ಟು ಒತ್ತು ನೀಡಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ 809 ಎಕರೆ ಕೆರೆ ಜಾಗ ಒತ್ತುವರಿ ತೆರವು ಬಾಕಿ ಉಳಿದಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ತೆರಳುವ ಮಾರ್ಗಮಧ್ಯೆ ಸಚಿವರು ಕಾರಿನಲ್ಲೇ ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್ ಅವರೊಂದಿಗೆ ಸಭೆ ನಡೆಸಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳ ಕುರಿತು ಚರ್ಚಿಸಿದರು.
1,292 ಕೆರೆಗಳಲ್ಲಿ 801 ಕೆರೆಗಳ ಜಾಗ ಒತ್ತುವರಿ!
ಬೆಂಗಳೂರು ದಕ್ಷಿಣ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 1,292 ಕೆರೆಗಳಿವೆ. ಈ ಪೈಕಿ 801 ಕೆರೆಗಳ 1,014 ಎಕರೆ ಭೂಮಿ ಒತ್ತುವರಿಯಾಗಿರುವುದು ಕಂಡುಬಂದಿದೆ.ಈಗಾಗಲೇ 72 ಕೆರೆಗಳ 205 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಆದರೆ, ಇನ್ನೂ 729 ಕೆರೆಗಳ 809 ಎಕರೆ ಪ್ರದೇಶದ ಒತ್ತುವರಿ ತೆರವು ಬಾಕಿ ಇದೆ.
ಒತ್ತುವರಿ ತೆರವುಗೊಳಿಸಿ ಕೆರೆಗಳನ್ನು ಸಂರಕ್ಷಿಸುವುದರ ಜೊತೆಗೆ ನೀರು ಸಂಗ್ರಹಕ್ಕೆ ಕ್ರಮ ಕೈಗೊಂಡು ಅಂತರ್ಜಲ ಮಟ್ಟ ಹೆಚ್ಚಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.ಒತ್ತುವರಿ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿದ್ದರೆ, ಮನೆಗಳನ್ನು ಹೊರತುಪಡಿಸಿ ಉಳಿದ ಒತ್ತುವರಿ ಪ್ರದೇಶದ ಸರ್ವೆ ನಡೆಸಿ ತೆರವುಗೊಳಿಸಬೇಕು. ರಾಜಕಾಲುವೆಗಳಲ್ಲಿರುವ ಅಡೆತಡೆಗಳನ್ನು ನಿವಾರಿಸಿ ಪುನಶ್ಚೇತನಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಇ-ಸ್ವತ್ತು ವಿತರಣೆಯಲ್ಲಿ ಹಣ ಕೇಳಿದರೆ ಕಠಿಣ ಕ್ರಮ
ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಹಾಗೂ ದಾಖಲೆ ಇಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನ ಆರಂಭಿಸಲಾಗಿದೆ. ಅರ್ಜಿ ಬಂದ ತಕ್ಷಣ ಪಿಡಿಒಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಯಾವುದೇ ವಿಳಂಬವಿಲ್ಲದೆ ಇ-ಸ್ವತ್ತು ವಿತರಿಸಬೇಕು ಎಂದು ಸೂಚಿಸಿದ್ದಾರೆ.
ಇ-ಸ್ವತ್ತು ನೀಡುವ ಸಂದರ್ಭದಲ್ಲಿ ಯಾವುದೇ ಪಿಡಿಒ ಅಥವಾ ಸಿಬ್ಬಂದಿ ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಟ್ಟರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಇ-ಸ್ವತ್ತು ಅಭಿಯಾನದ ಬಗ್ಗೆ ಜನರಿಗೆ ವ್ಯಾಪಕ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ
ಮುಂದಿನ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಈಗಿನಿಂದಲೇ ಜಲ ಬಜೆಟ್ ಸಿದ್ಧಪಡಿಸಿ, ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂಬುದನ್ನು ಅಂದಾಜಿಸಬೇಕು.
ನೀರಿನ ಮೂಲಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಟ್ಯಾಂಕರ್ಗಳ ಬಾಡಿಗೆಯನ್ನು ಸಕಾಲದಲ್ಲಿ ಪಾವತಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
ವಾರದಲ್ಲಿ ಎರಡು ದಿನ ಗ್ರಾಮಗಳಿಗೆ ಭೇಟಿ ಕಡ್ಡಾಯ
ಜಿಲ್ಲಾ ಪಂಚಾಯತ್ ಸಿಇಒ ವಾರದಲ್ಲಿ ಕನಿಷ್ಠ ಎರಡು ದಿನ ನಾಲ್ಕು ಗ್ರಾಮಗಳಿಗೆ ಭೇಟಿ ನೀಡಬೇಕು ಎಂದು ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಕೆಳಗಿನ ವಿಚಾರಗಳ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
· ಗ್ರಾಮೀಣ ರಸ್ತೆ ಅಭಿವೃದ್ಧಿ
· ಕುಡಿಯುವ ನೀರಿನ ಸಮಸ್ಯೆ
· ಬೀದಿ ದೀಪಗಳ ನಿರ್ವಹಣೆ
· ಇ-ಸ್ವತ್ತು ವಿತರಣೆ
· ಕಟ್ಟಡ ನಕ್ಷೆ ಮಂಜೂರಾತಿ
· ಗ್ರಾಮಗಳ ಸ್ವಚ್ಛತೆ ಮತ್ತು ನೈರ್ಮಲ್ಯ
· ಕೆರೆಗಳ ಅಭಿವೃದ್ಧಿ
· ವಿಬಿಜಿ ರಾಮ್ ಜಿ ಯೋಜನೆಯ ಪ್ರಗತಿ
ಕಾರ್ಮಿಕರಿಗೆ 15 ದಿನದೊಳಗೆ ಕೂಲಿ ಪಾವತಿಗೆ ಸೂಚನೆ
ವಿಬಿಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿಯಾಗಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಅಲ್ಲದೆ, ಈ ಯೋಜನೆಯಡಿ ಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ದನದ ಕೊಟ್ಟಿಗೆ, ಕುರಿ ಮತ್ತು ಮೇಕೆ ಕೊಟ್ಟಿಗೆ, ಕೊಳವೆಬಾವಿ ಮರುಪೂರಣ ಪಿಟ್ ಹಾಗೂ ಕೃಷಿ ಹೊಂಡಗಳಂತಹ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.
ಮೈಸೂರಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಜಲಜೀವನ್ ಮಿಷನ್ ಹಾಗೂ ವಿಬಿ-ಗ್ರಾಮ್ಜಿ (VB-G RAM G) ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು. ಜಲ ಬಜೆಟಿಂಗ್ ಮೂಲಕ ಪ್ರತಿ ಗ್ರಾಮದ ಪ್ರಸ್ತುತ ಮತ್ತು ಭವಿಷ್ಯದ ನೀರಿನ ಅಗತ್ಯವನ್ನು ವೈಜ್ಞಾನಿಕವಾಗಿ ಅಂದಾಜಿಸಿ ಯೋಜನೆ ರೂಪಿಸಬೇಕು ಎಂದರು.
ಜಲಜೀವನ್ ಮಿಷನ್ ಅಡಿಯಲ್ಲಿ ಗ್ರಾಮದ ಕಟ್ಟಕಡೆಯ ಮನೆಗೂ ಶುದ್ಧ ಕುಡಿಯುವ ನೀರು ತಲುಪುವಂತೆ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಬೇಕು .ವಿಬಿ-ಗ್ರಾಮ್ಜಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಜನರಿಗೆ ಮೂಲಸೌಕರ್ಯ, ಗ್ರಾಮಗಳಿಗೆ ಸಮಗ್ರ ಅಭಿವೃದ್ಧಿ ಹಾಗೂ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವುದು ನಮ್ಮ ಸಂಕಲ್ಪ ಎಂದಿದ್ದಾರೆ.

