ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರು ಬೃಹತ್ ಖೋಟಾನೋಟು ಜಾಲವನ್ನು ಪತ್ತೆ ಮಾಡಿದ್ದಾರೆ. ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ನೋಟು ದಂಧೆಕೋರರನ್ನು ಹೆಡೆಮುರಿ ಕಟ್ತಿದ್ದಾರೆ.
ಪ್ರಕರಣ ಸಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವು ಬೆನ್ನತ್ತಿದ ಪೊಲೀಸರು, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಟ್‌ವರ್ಕ್ ಹೊಂದಿದ್ದ ಮುದ್ರಣ, ಮಾರಾಟ ಮತ್ತು ಚಲಾವಣೆಯ ಪ್ರತ್ಯೇಕ ವ್ಯವಸ್ಥಿತ ಜಾಲವನ್ನು ಬೇಧಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಹುಳಿಯೂರಿನ ಅಂಗಡಿಯೊಂದರಲ್ಲಿ ಇಬ್ಬರು ಸಿಗರೇಟ್ ಖರೀದಿಸಿ 500 ರೂಪಾಯಿಯ ನಕಲಿ ನೋಟು ನೀಡಿ ಪರಾರಿಯಾಗಿದ್ದರು. ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರು ಮಂದಿಯಲ್ಲಿ ಬೆಂಗಳೂರಿನ ರುದ್ರೇಶ್ ಎಂಬಾತ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರೆ, ಮೈಸೂರಿನ ರವಿ ಅದನ್ನು ಮಾರಾಟ ಮಾಡುವ ಜವಾಬ್ದಾರಿ ಹೊತ್ತಿದ್ದ. ಅನಂತಪುರದ ಕುಬೇರಪ್ಪ ಹಾಗೂ ಹನುಮಂತಪ್ಪ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಇವರಿಂದ ನೋಟು ಖರೀದಿಸುತ್ತಿದ್ದ ವೆಂಕಟೇಶ್ ಮತ್ತು ತಿಲಕ್ ಕುಮಾರ್ ಸಾರ್ವಜನಿಕರ ನಡುವೆ ಚಲಾವಣೆ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.
ಬಂಧಿತರಿಂದ ಸದ್ಯ 500 ರೂ. ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ವೇಳೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ನೋಟು ಚಲಾವಣೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರೆದಿದೆ.

