HomeLatest NewsBIG NEWS: ಮಳೆ ಹಾನಿ ಸಂತ್ರಸ್ತರಿಗೆ ತಕ್ಷಣ ಪರಿಹಾರ: ಸಿಎಂ ಸಿದ್ಧರಾಮಯ್ಯ

BIG NEWS: ಮಳೆ ಹಾನಿ ಸಂತ್ರಸ್ತರಿಗೆ ತಕ್ಷಣ ಪರಿಹಾರ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿರುವ ಎಲ್ಲಾ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಆಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಹಾನಿ ಕುರಿತು ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಚನೆ ನೀಡಿದ್ದೇನೆ. ತಗ್ಗು ಪ್ರದೇಶಗಳಲ್ಲಿ ಬೇಸ್‌ಮೆಂಟ್ ಗಳಲ್ಲಿ ನಿರ್ಮಾಣಕ್ಕೆ ಇನ್ನು ಮುಂದೆ ಅನುಮತಿ ನೀಡದಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ನೀಡಿದ್ದೇನೆ. 166 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ತಗ್ಗು ಪ್ರದೇಶಗಳೆಂದು ಗುರುತಿಸಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮಾನ್ಯತಾ ಟೆಕ್ಪಾರ್ಕ್ ಬಳಿ ರಾಜಕಾಲುವೆ ಪರಿಶೀಲನೆ ನಡೆಸಿದ್ದು ಅಲ್ಲಿ ರಾಜಕಾಲುವೆ ಒತ್ತುವರಿ ಗಮನಿಸಲಾಗಿದೆ. ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದ್ದೇನೆ. ಮಾನ್ಯತಾ ಟೆಕ್ಪಾರ್ಕ್ ಸಿಇಒ ಅವರು ಸ್ವಂತ ರಸ್ತೆಯಲ್ಲಿ 90ದಿನಗಳಲ್ಲಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್‌ಬಿಆರ್ ಬಡಾವಣೆಯ ಐದನೇ ಹಂತದ ರಾಜಕಾಲುವೆ ಸಮಸ್ಯೆಯಿದ್ದು, ಅಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗೆ ಅಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ. ಚರಂಡಿಗೆ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

• ಸಾಯಿ ಲೇಔಟ್‌ಗೆ ಭೇಟಿ ನೀಡಿದ್ದು, ಅದು ರಾಜಕಾಲುವೆಗಿಂತ ತಗ್ಗು ಪ್ರದೇಶದಲ್ಲಿದೆ. ರೈಲ್ವೆ ಸೇತುವೆ ಬಳಿ ವೆಂಟ್ ಕಿರಿದಾಗಿದ್ದು, ಅದನ್ನು ಅಗಲಗೊಳಿಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ. ಅನೇಕ ವರ್ಷದಿಂದ ಈ ಸಮಸ್ಯೆಯಿದೆ. ವೆಂಟ್‌ಗಳ ನಿರ್ಮಾಣ ಮತ್ತು  ಅಗಲಗೊಳಿಸಲು ಈಗಾಗಲೇ ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ. ಬಿಬಿಎಂಪಿ ಇದಕ್ಕಾಗಿ ಒಟ್ಟು ₹13 ಕೋಟಿ ಬಿಡುಗಡೆಗೆ ಸೂಚನೆ ನೀಡಿದ್ದೇನೆ. ಈಗಾಗಲೇ ₹6 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ₹3 ಕೋಟಿ ಪಾವತಿಸಲಾಗಿದೆ.

ಮಹಾದೇವಪುರದ ಪಣತ್ತೂರು ಗಾರ್ಡನ್‌ನಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಪ್ರತಿ ವರ್ಷ ಸಮಸ್ಯೆ ಆಗುತ್ತಿದೆ. ರೈಲ್ವೇ ಲೈನ್ ಕೆಳಗಡೆ ಅಗಲ ಬಹಳ ಕಡಿಮೆಯಿದೆ. ಇದನ್ನು ವಿಸ್ತರಿಸಲು ಹಾಗೂ ರಸ್ತೆ ಅಗಲೀಕರಣ ಕಾರ್ಯ ಈಗಾಗಲೇ ನಡೆಯುತ್ತಿದ್ದು, ಶೇ.20ರಷ್ಟು ಕಾಮಗಾರಿ ಬಾಕಿಯಿದೆ. ಇಲ್ಲಿ ಟ್ರೆಂಚ್ಲೆಸ್ ತಾಂತ್ರಿಕತೆ ಬಳಸಿ ಕೆಲಸ ಮಾಡುತ್ತಿದ್ದು, 45ದಿನಗಳ ಒಳಗಾಗಿ ಉಳಿದಿರುವ ಎಲ್ಲಾ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇನೆ.

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಾಲ್ಕು ಕಡೆಗಳಿಂದ ನೀರು ಬರುತ್ತಿದ್ದು, ಅಲ್ಲಿಂದ ಎಲ್ಲಾ ನೀರು ಹೆಚ್ಎಸ್ಆರ್ ಲೇಔಟ್ ಕಡೆ ಹರಿದು ಬರುತ್ತದೆ. ಮೆಟ್ರೋ, ಬಿಬಿಎಂಪಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಮನ್ವಯದಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಈ ಮೂರು ವಿಭಾಗಗಳು ಈ ಕುರಿತು ಯೋಜನೆ ರೂಪಿಸಲು ಸೂಚನೆ ನೀಡಿದ್ದೇನೆ.

ಗುರಪ್ಪನಪಾಳ್ಯದಲ್ಲಿ ತಡೆಗೋಡೆ ಕುಸಿದು ಬಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿರುವ ಎಲ್ಲಾ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಲಾಗುವುದು. ಹಾನಿ ಕುರಿತು ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಚನೆ ನೀಡಿದ್ದೇನೆ.

ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ಗಳಲ್ಲಿ ನಿರ್ಮಾಣಕ್ಕೆ ಇನ್ನು ಮುಂದೆ ಅನುಮತಿ ನೀಡದಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ನೀಡಿದ್ದೇನೆ. 166 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ತಗ್ಗು ಪ್ರದೇಶಗಳೆಂದು ಗುರುತಿಸಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ.

ರಾಜಕಾಲುವೆ ಸುಮಾರು 860 ಕಿಮೀ ಇದೆ. 491 ಕಿಮೀ ರಾಜಕಾಲುವೆಯಲ್ಲಿ ಲೈನಿಂಗ್ ಕೆಲಸ ಮುಗಿದಿದೆ. 125 ಕಿಮೀ ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದು, ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು. ಇನ್ನುಳಿದ 173 ಕಿಮೀ ರಾಜಕಾಲುವೆ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದು ಕಾಮಗಾರಿಗೆ ಕೈಗೊಂಡಿದ್ದೇವೆ. ಇದರ ಟೆಂಡರ್ ಮುಗಿದಿದ್ದು, ಮೂರು ವರ್ಷಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದೇನೆ.

ಒತ್ತುವರಿ ಮಾಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ, ಮುಲಾಜಿಲ್ಲದೆ ತೆರವುಗೊಳಿಸಲು ಸ್ಪಷ್ಟ ಸೂಚನೆ ನೀಡಿದ್ದೇನೆ.  ಬೆಂಗಳೂರಿನಲ್ಲಿ ನೆರೆ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ರಾಜಕಾಲುವೆ ಅಭಿವೃದ್ದಿಯಂತಹ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸಿ ಕಾಮಗಾರಿಗಳನ್ನು ಕೈಗೊಂಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular