ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಇತ್ತೀಚೆಗೆ ದೇವಸ್ಥಾನಕ್ಕೆ ನೀಡಿದ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವೀಡಿಯೋ ಒಂದನ್ನು ಹಂಚಿಕೊಂಡ ನಟಿ, ಪೂಜೆಯ ಸಮಯದಲ್ಲಿ ಕೂಲಿಂಗ್ ಗ್ಲಾಸ್ ಧರಿಸಿದ್ದಕ್ಕಾಗಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ ಭೂಮಿ ಪಡ್ನೇಕರ್ ತಮ್ಮ ದೇವಸ್ಥಾನ ಭೇಟಿಯ ಚಿತ್ರಗಳು ಮತ್ತು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಪ್ಪು ಬಣ್ಣದ ಟಾಪ್ ಹಾಗೂ ಬ್ಲೂ ಡೆನಿಮ್ ಜೀನ್ಸ್ ಧರಿಸಿದ್ದ ನಟಿ, ಕಣ್ಣಿಗೆ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. “ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ, ನಾನು ಸುಲಭವಾದ ಜೀವನಕ್ಕಾಗಿ ಪ್ರಾರ್ಥಿಸುವುದಿಲ್ಲ, ಬದಲಿಗೆ ಅದನ್ನು ಗೌರವದಿಂದ ನಡೆಸುವ ಶಕ್ತಿಗಾಗಿ ಪ್ರಾರ್ಥಿಸುತ್ತೇನೆ. ಹರ್ ಹರ್ ಮಹಾದೇವ್” ಎಂದು ಅವರು ಬರೆದುಕೊಂಡಿದ್ದರು.
ಶ್ರಾವಣ ಮಾಸದಲ್ಲಿ ನಟಿಯ ದೇವತಾ ಭಕ್ತಿಯನ್ನು ಅನೇಕ ಅಭಿಮಾನಿಗಳು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಪೂಜೆಯ ಸಮಯದಲ್ಲಿ ಕಣ್ಣಿನ ಗ್ಲಾಸ್ ಧರಿಸಿದ್ದಕ್ಕಾಗಿ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಪೂಜೆಯಂತಹ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವಾಗ ಇಂತಹ ಫ್ಯಾಷನ್ ಪರಿಕರಗಳನ್ನು ಧರಿಸುವುದು ಸೂಕ್ತವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕನಿಷ್ಠ ದೇವರಿಗೆ ಪೂಜೆ ಮಾಡುವಾಗಲಾದರೂ ಕಣ್ಣಿನ ಚಶ್ಮಾ ತೆಗೆಯಬೇಕಿತ್ತು, ಪೂಜೆ ಮಾಡುವಾಗ ಯ ಯಾರೂ ಕೂಲಿಂಗ್ ಗ್ಲಾಸ್ ಹಾಕಿ ಪೂಜೆ ಮಾಡುವುದನ್ನು ನೋಡಿಲ್ಲ ಎಂದು ಹಲವರು ಕಮೆಂಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಭೂಮಿ ಪಡ್ನೇಕರ್ ಇತ್ತೀಚೆಗೆ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈ ಐತಿಹಾಸಿಕ ಸಿನಿಮಾದಲ್ಲಿ ಬೆಳವಡಿ ಮಲ್ಲಮ್ಮ ಅವರ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ಸಿಂಗ್ ನಿರ್ದೇಶನದ ಈ ಎರಡು ಭಾಗಗಳ ಐತಿಹಾಸಿಕ ಚಿತ್ರದಲ್ಲಿ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜರ ಪಾತ್ರದಲ್ಲಿದ್ದು, ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

