HomeIndiaಮೂತ್ರ ವಿಸರ್ಜನೆಗೆ ಹೋದಾಗಲೇ ಕಾದಿತ್ತು ಸಾವು ; ತೆರೆದ ಲಿಫ್ಟ್ ಗುಂಡಿಗೆ ಬಿದ್ದು ವ್ಯಕ್ತಿ ದುರ್ಮರಣ...

ಮೂತ್ರ ವಿಸರ್ಜನೆಗೆ ಹೋದಾಗಲೇ ಕಾದಿತ್ತು ಸಾವು ; ತೆರೆದ ಲಿಫ್ಟ್ ಗುಂಡಿಗೆ ಬಿದ್ದು ವ್ಯಕ್ತಿ ದುರ್ಮರಣ !

ಮಹಾರಾಷ್ಟ್ರದ ಮುಂಬೈನ ಮಾತುಂಗಾ ಪ್ರದೇಶದಲ್ಲಿರುವ ನಿರ್ಮಾಣ ಹಂತದ ಬಹುಮಹಡಿ ವಸತಿ ಸಮುಚ್ಚಯವೊಂದರಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಕಟ್ಟಡದ 6ನೇ ಮಹಡಿಯಿಂದ ಯಾವುದೇ ರಕ್ಷಾ ಕವಚವಿಲ್ಲದ, ತೆರೆದ ಸ್ಥಿತಿಯಲ್ಲಿದ್ದ ಲಿಫ್ಟ್ ಅಳವಡಿಸುವ ಸ್ಥಳಕ್ಕೆ ಆಯತಪ್ಪಿ ಬಿದ್ದ 37 ವರ್ಷದ ಕಾರ್ಮಿಕನೊಬ್ಬ ಸ್ಥಳದಲ್ಲೇ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ತಲೆಬುರುಡೆ ಹಾಗೂ ಎದೆಯ ಮೂಳೆಗಳು ಸಂಪೂರ್ಣವಾಗಿ ಮುರಿದು ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮೃತ ದುರ್ದೈವಿಯನ್ನು ಸಂಜಯ್ ಮಿಂಜ್ (37) ಎಂದು ಗುರುತಿಸಲಾಗಿದೆ. ಈತ ಕಾಮಗಾರಿ ಸ್ಥಳದಲ್ಲಿ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಸೋದರಳಿಯ ಪ್ರಕಾಶ್ ಬಕ್ಲಾ ಎಂಬಾತನನ್ನು ಭೇಟಿ ಮಾಡಲು ಛತ್ತೀಸ್‌ಗಢದಿಂದ ಇಲ್ಲಿಗೆ ಬಂದಿದ್ದನು. ವಡಾಲಾದ ಬಾಲಕೃಷ್ಣ ಸುಳೆ ಮಾರ್ಗದಲ್ಲಿರುವ ತ್ರಿಮುಖ್ ಶಾಂತಿಕುಂಜ್ ಎಂಬ ನಿರ್ಮಾಣ ಹಂತದ ವಸತಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೆಲಮಹಡಿಯಲ್ಲಿ ತಗಡಿನ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿತ್ತಾದರೂ, ದೂರುದಾರ ಪ್ರಕಾಶ್ ಸೇರಿದಂತೆ ಕೆಲವರು ಕಟ್ಟಡದ 6ನೇ ಮಹಡಿಯಲ್ಲೇ ಉಳಿದುಕೊಂಡಿದ್ದರು. ಸೆಪ್ಟೆಂಬರ್ 9 ರ ರಾತ್ರಿ ಊಟ ಮುಗಿಸಿದ ನಂತರ ಸಂಜಯ್ ಮಿಂಜ್ ಕೂಡ 6ನೇ ಮಹಡಿಯಲ್ಲೇ ಮಲಗಿಕೊಂಡಿದ್ದನು. ಗುರುವಾರ ಮುಂಜಾನೆ ಸುಮಾರು 1 ಗಂಟೆಯ ಸುಮಾರಿಗೆ ಎಚ್ಚರಗೊಂಡ ಸಂಜಯ್, ಕತ್ತಲೆಯಲ್ಲಿ ಮೂತ್ರ ವಿಸರ್ಜನೆಗೆಂದು ಎದ್ದು ಹೋಗಿದ್ದಾನೆ. ಆ ಸಂದರ್ಭದಲ್ಲಿ ಯಾವುದೇ ತಡೆಗೋಡೆ ಅಥವಾ ಸುರಕ್ಷತಾ ಬೇಲಿ ಇಲ್ಲದ, ತೆರೆದಿದ್ದ ಲಿಫ್ಟ್ ಗುಂಡಿಯ ಒಳಗೆ ಆಯತಪ್ಪಿ ನೇರವಾಗಿ ನೆಲಮಹಡಿಗೆ ಬಿದ್ದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಳಗೆ ಭಾರಿ ಶಬ್ದ ಕೇಳಿ ನೆಲಮಹಡಿಯಲ್ಲಿದ್ದವರು ಕಿರುಚಿಕೊಂಡಾಗ ಮೇಲಿದ್ದ ಕಾರ್ಮಿಕರು ಪರಿಶೀಲನೆ ನಡೆಸಿದ್ದಾರೆ. ಆಗ ಸಂಜಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಂಬುಲೆನ್ಸ್ ಕರೆಸಿ ಗಂಭೀರ ಸ್ಥಿತಿಯಲ್ಲಿದ್ದ ಸಂಜಯ್‌ನನ್ನು ಸಿಯಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ವಸತಿ ಯೋಜನೆಯನ್ನು ತ್ರಿಧಾತು ರಿನೋವೇಟರ್ಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿದ್ದು, ಕಾಮಗಾರಿಯ ಗುತ್ತಿಗೆಯನ್ನು ಟಾಸ್ಕ್ ಇನ್ಫ್ರಾ ಪ್ರಾಜೆಕ್ಟ್ಸ್ ಎಲ್‌ಎಲ್‌ಪಿ ಸಂಸ್ಥೆಗೆ ನೀಡಲಾಗಿತ್ತು. ಹಾಗೆಯೇ ಕಾರ್ಮಿಕರನ್ನು ಪೂರೈಸುವ ಗುತ್ತಿಗೆಯನ್ನು ಕೆ.ವಿ. ನಾಯರ್ ಎಂಬುವವರಿಗೆ ವಹಿಸಲಾಗಿತ್ತು. ಸ್ಥಳದಲ್ಲಿ ಯಾವುದೇ ಸುರಕ್ಷತಾ ಮಾನದಂಡಗಳನ್ನು ಪಾಲಿಸದೆ ತೆರೆದ ಲಿಫ್ಟ್ ಗುಂಡಿಯನ್ನು ಹಾಗೆಯೇ ಬಿಟ್ಟಿದ್ದೇ ಈ ಸಾವಿಗೆ ಕಾರಣ ಎನ್ನಲಾಗಿದ್ದು, ಮಾತುಂಗಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular