ಬೆಂಗಳೂರು: ಪಾರ್ಶ್ವವಾಯು ಪೀಡಿತ ಹೆತ್ತ ತಾಯಿಯನ್ನು ಮಗ ಮಹಡಿಯಿಂದ ತಳ್ಳಿ ಕೊಲೆಗೈದಿರುವ ಅಮಾನವೀಯ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಬೆಮೆಲ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಸಾವಿತ್ರಮ್ಮ (72) ಮಗನಿಂದ ಕೊಲೆಯಾದ ತಾಯಿ. ವೆಂಕಟೇಶ್ ತಾಯಿಯನ್ನೇ ಕೊಲೆಗೈದ ಮಗ.
ಸಾವಿತ್ರಮ್ಮ ಸುಮಾರು 4-5 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪಾರ್ಶ್ವವಾಯು ಪೀಡಿತರಾಗಿ ಮನೆಯಲ್ಲಿಯೇ ಇದ್ದರು. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತಾಯಿಯ ಮೇಲೆ ಕಿಂಚಿತ್ತೂ ಕರುಣೆಯನ್ನು ತೋರದ ಮಗ ಮನುಷತ್ವವನ್ನು ಮರೆತು ಮನೆಯ 3ನೇ ಮಹಡಿಯಿಂದ ತಾಯಿಯನ್ನು ತಳ್ಳಿದ್ದಾನೆ. ಮಹಡಿಯಿಂದ ಬಿದ್ದ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

