ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪದೇ ಪದೇ ವಿದ್ಯುತ್ ವ್ಯತ್ಯಗಳಾಗುತ್ತಿವೆ. ನಿರ್ವಹಣೆ ಹಾಗೂ ತುರ್ತು ಕಾಮಗಾರಿ ಕಾರಣದಿಂದಾದಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್ ವ್ಯತ್ಯಯದ ಬಗ್ಗೆ ಮಾಹಿತಿ ನೀಡುತ್ತದೆ. ಇದೀಗ ನಾಳೆ ಆಗಸ್ಟ್ 29ರಂದು ನಗರದ ಹಲವು ಭಾಗಗಳಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ತುರ್ತು ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಕೆಪಿಟಿಸಿಎಲ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಉಪಕೇಂದ್ರಗಳ ನಿರ್ವಹಣಾ ಕಾಮಗಾರಿಯಿಂದಾಗಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ರಾಜನಕುಂಟೆ ಹಾಗೂ ಕಾಡುಗೋಡಿ ಉಪಕೇಂದ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರಮುಖವಾಗಿ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಮರಸಂದ್ರ, ಚೆಲ್ಲಹಳ್ಳಿ, ಇಟಗಲ್‌ಪುರ, ದಿಬ್ಬೂರು, ಕಾಕೋಲು, ಬೆಳ್ಳತೂರು, ಕಾಡುಗೋಡಿ, ಚನ್ನಸಂದ್ರ, ಇಮ್ಮಡಿಹಳ್ಳಿ, ಹಗಡೂರು, ಪ್ರಶಾಂತ್ ಲೇಔಟ್ ಹಾಗೂ ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಹಾಗೂ ಗ್ರಾಹಕರು ತಮ್ಮ ದೈನಂದಿನ ಗೃಹ ಮತ್ತು ಕಚೇರಿ ಕೆಲಸಗಳನ್ನು ಮುಂಚಿತವಾಗಿಯೇ ಯೋಜಿಸಿಕೊಂಡು, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಬೆಸ್ಕಾಂ ಮನವಿ ಮಾಡಿದೆ.

