ಬೆಂಗಳೂರು: ಸರ್ಕಾರಿ ನೌಕರರು ಧರಿಸುವ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿ ಕೊರಳುದಾರದ ದುರ್ಬಳಕೆಯನ್ನು ತಡೆಯಲು ರಾಜ್ಯ ಸರ್ಕಾರ ಮಹತ್ವದ ಸೂಚನೆ ನೀಡಿದೆ.
‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿ ಕೊರಳುದಾರವನ್ನು ಧರಿಸುವಂತೆ ಈ ಹಿಂದೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಇದೀಗ ಕೆಲವೆಡೆ ಈ ಕೊರಳುದಾರಗಳು ವ್ಯಾವಹಾರಿಕವಾಗಿ ಮಾರಾಟವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಕೆಲವು ಜನಸಾಮಾನ್ಯರು ಕೂಡ ಕೆಂಪು-ಹಳದಿ ಕೊರಳುದಾರಗಳನ್ನು ಖರೀದಿಸಿ, ಅವುಗಳನ್ನು ಧರಿಸಿಕೊಂಡು ಸರ್ಕಾರಿ ಕಚೇರಿಗಳಿಗೆ ಅನಧಿಕೃತವಾಗಿ ಪ್ರವೇಶಿಸುತ್ತಿರುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಿದೆ.
ಕೊರಳುದಾರ ಮಾತ್ರ ಪರಿಶೀಲಿಸಬಾರದು
ಸರ್ಕಾರಿ ಕಚೇರಿಗಳಿಗೆ ಆಗಮಿಸುವವರನ್ನು ಪರಿಶೀಲಿಸುವ ಸಂದರ್ಭದಲ್ಲಿ ಅವರು ಕೇವಲ ಕೆಂಪು-ಹಳದಿ ಕೊರಳುದಾರ ಧರಿಸಿರುವುದನ್ನು ನೋಡಿ ಒಳಗೆ ಪ್ರವೇಶ ನೀಡಬಾರದು ಎಂದು ಸರ್ಕಾರ ಸೂಚಿಸಿದೆ. ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ಕಚೇರಿಗೆ ಪ್ರವೇಶ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜಕೀಯ) ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್ ಬಿಕೆ ಅವರು ಆಗಸ್ಟ್ 27ರಂದು ಸುತ್ತೋಲೆ ಹೊರಡಿಸಿದ್ದಾರೆ.
ಎಲ್ಲಾ ಸರ್ಕಾರಿ ಕಚೇರಿಗಳಿಗೂ ಅನ್ವಯ
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು, ವಿಧಾನಸೌಧ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವಿಶ್ವವಿದ್ಯಾಲಯಗಳು, ನಿಗಮ-ಮಂಡಳಿಗಳು ಹಾಗೂ ಇತರ ಸರ್ಕಾರಿ ಸಂಸ್ಥೆಗಳಲ್ಲಿ ಗುರುತಿನ ಚೀಟಿ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಸರ್ಕಾರಿ ನೌಕರರ ಗುರುತಿನ ಚೀಟಿಯ ಕೊರಳುದಾರವನ್ನು ಧರಿಸಿರುವುದು ಮಾತ್ರವೇ ಅಧಿಕೃತ ಗುರುತಿನ ದೃಢೀಕರಣವಲ್ಲ. ಗುರುತಿನ ಚೀಟಿಯನ್ನು ಪರಿಶೀಲಿಸಿದ ಬಳಿಕವೇ ಪ್ರವೇಶ ನೀಡಬೇಕು ಎಂಬುದು ಸರ್ಕಾರದ ಈ ಸೂಚನೆಯ ಪ್ರಮುಖ ಉದ್ದೇಶವಾಗಿದೆ.
ಸರ್ಕಾರದ ಅಧಿಕೃತ ಆದೇಶ
📄 Official Documents / Supporting Documents

