ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಮ್ಮದಿಯಾದ ಒಂದು ಬಾಡಿಗೆ ಮನೆ ಹುಡುಕುವುದು ಅಂದುಕೊಂಡಷ್ಟು ಸುಲಭವಲ್ಲ. ಇಲ್ಲಿನ ರಿಯಲ್ ಎಸ್ಟೇಟ್ ಪೈಪೋಟಿ ಎಷ್ಟಿದೆ ಎಂದರೆ ನೀವು ಒಂದು ನಿಮಿಷ ಯೋಚಿಸುವಷ್ಟರಲ್ಲಿ ನಿಮ್ಮ ಕೈಗೆ ಸಿಗಬೇಕಿದ್ದ ಮನೆ ಮತ್ತೊಬ್ಬರ ಪಾಲಾಗಿರುತ್ತದೆ ಇಂತಹದ್ದೇ ಒಂದು ಕಹಿ ಅನುಭವವನ್ನು ಬೆಂಗಳೂರಿನ ಯುವತಿಯೊಬ್ಬರು ಹಂಚಿಕೊಂಡಿದ್ದು, ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಘಟನೆಯ ವಿವರ:
ಇನ್‌ಸ್ಟಾಗ್ರಾಮ್‌ನಲ್ಲಿ ‘@namma_rants’ ಎಂಬ ಹೆಸರಿನ ಯುವತಿ, ತಾನು ಬೆಂಗಳೂರಿನಲ್ಲಿ ಮನೆ ಹುಡುಕುವಾಗ ಎದುರಿಸಿದ ಸಂಕಷ್ಟವನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. “ಜೀವನದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದಕ್ಕಿಂತಲೂ ಇಷ್ಟಪಟ್ಟ ಮನೆ ಕೈತಪ್ಪುವುದು ಹೆಚ್ಚು ನೋವು ನೀಡುತ್ತದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
https://www.instagram.com/reel/DXCfNnICVTu/?utm_source=ig_web_copy_link&igsh=NTc4MTIwNjQ2YQ==
ಕೇವಲ ಒಂದೂವರೆ ಗಂಟೆಯಲ್ಲಿ ಫ್ಲ್ಯಾಟ್ ಬೇರೆಯವರ ಪಾಲು
ಯುವತಿಯ ಪ್ರಕಾರ, ಅವರು ಸುಮಾರು ಒಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಸುಸಜ್ಜಿತ (Fully Furnished) 1BHK ಮನೆಗಾಗಿ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಗರಡುಚಾರ್ ಪಾಳ್ಯ (Garudacharpalya) ಸಮೀಪ ಅವರಿಗೆ ಒಂದು ಮನೆ ಇಷ್ಟವಾಗಿತ್ತು. ಮಾಲೀಕರು ವಿಧಿಸಿದ ಎಲ್ಲಾ ಬಾಡಿಗೆ ಷರತ್ತುಗಳಿಗೆ ಒಪ್ಪಿದ್ದ ಯುವತಿ, ಅಡ್ವಾನ್ಸ್ ಹಣ ನೀಡುವ ಮುನ್ನ ಅಂತಿಮವಾಗಿ ನಿರ್ಧರಿಸಲು ಕೇವಲ ಒಂದೂವರೆ ಗಂಟೆ ಸಮಯ ಕೇಳಿದ್ದರು.
ಆದರೆ, ಕೇವಲ ಒಂದೂವರೆ ಗಂಟೆಯ ನಂತರ ಅವರು ಮಾಲೀಕರಿಗೆ ಕರೆ ಮಾಡಿದಾಗ, ಮನೆ ಈಗಾಗಲೇ ಬೇರೆಯವರಿಗೆ ಬಾಡಿಗೆಗೆ ಹೋಗಿದೆ, ಅವರು ಮುಂಗಡ ಹಣ ಪಾವತಿಸಿದ್ದಾರೆ ಎಂಬ ಉತ್ತರ ಬಂದಿದೆ. ಇದರಿಂದ ದಿಗಿಲುಗೊಂಡ ಯುವತಿ, ಕಣ್ಣು ಮುಚ್ಚಿ ಬಿಡುವುದರೊಳಗೆ ಮನೆ ಮಾಯವಾಗಿದೆ ಇದು ನಿಜಕ್ಕೂ ಹೃದಯ ಒಡೆದಂತಹ ಅನುಭವ ಎಂದು ನೋವು ತೋಡಿಕೊಂಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ:
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದು, ಬೆಂಗಳೂರಿನ ಬಾಡಿಗೆ ಮನೆಯ ಪರಿಸ್ಥಿತಿ ನಿಜಕ್ಕೂ ಭಯಾನಕವಾಗಿದೆ ಎಂದಿದ್ದಾರೆ.
“ಬೆಂಗಳೂರಿನಲ್ಲಿ ಮನೆಗಳು ಆಫರ್ ಮುಗಿಯುವ ಮೊದಲೇ ಮಾಯವಾಗುತ್ತವೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ,
“ಬ್ರೇಕಪ್ ನೋವಿಗಿಂತ ಈ ಮನೆ ಸಿಗದೇ ಇರುವ ನೋವೇ ದೊಡ್ಡದು” ಎಂದು ಹಲವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ, ಐಟಿ ಹಬ್ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಾಡಿಗೆ ಮತ್ತು ಮನೆಗಳ ಬೇಡಿಕೆಯಿಂದಾಗಿ ಸಾಮಾನ್ಯ ಜನರು ಹೈರಾಣಾಗುತ್ತಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

