HomeKarnatakaಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಂವಿಧಾನದ ಆಶಯಗಳು ಅನುಷ್ಠಾನಗೊಳ್ಳಬೇಕು: ಸಿದ್ಧರಾಮಯ್ಯ

ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಂವಿಧಾನದ ಆಶಯಗಳು ಅನುಷ್ಠಾನಗೊಳ್ಳಬೇಕು: ಸಿದ್ಧರಾಮಯ್ಯ

ಮೈಸೂರು: ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಂವಿಧಾನದ ಆಶಯಗಳು ಅನುಷ್ಠಾನಗೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಗಳು ನಿವಾರಣೆಯಾಗಬೇಕು. ವಿಶೇಷವಾಗಿ ಬಡವರು, ಶೋಷಿತರು ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಶಕ್ತಿ ತುಂಬಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಸಮಾಜದಲ್ಲಿದ್ದ ಜಾತಿ ತಾರತಮ್ಯ, ಅಸ್ಪೃಶ್ಯತೆ, ಲಿಂಗಭೇದ ಮತ್ತು ಅನೇಕ ಅನಿಷ್ಟಗಳ ವಿರುದ್ಧ ಸಾಮಾಜಿಕ ಕ್ರಾಂತಿ ನಡೆಸಿದ್ದರು. ಜಾತಿ, ವರ್ಗ, ಲಿಂಗದ ಆಧಾರದಲ್ಲಿ ಮನುಷ್ಯರನ್ನು ವಿಭಜಿಸದೆ ಎಲ್ಲರೂ ಸಮಾನರು ಎಂಬ ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿದ್ದರು ಎಂದರು.

ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಗುಂಪಿಗೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲಕ್ಕೆ ಸೇರಿದವರು. ಎಲ್ಲ ಮನುಷ್ಯರೂ ಸಮಾನ ಗೌರವದಿಂದ ಬದುಕಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.

ಆದರೆ ಸುಮಾರು 900 ವರ್ಷಗಳ ನಂತರವೂ ಬಸವಣ್ಣನವರ ಕನಸಿನ ಸಮಾಜ ನಿರ್ಮಾಣವಾಗಿಲ್ಲ ಎನ್ನುವುದು ವಿಷಾದನೀಯ. ಇಂದಿಗೂ ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ, ಅಸ್ಪೃಶ್ಯತೆ, ಧರ್ಮಗಳ ನಡುವೆ ಸಂಘರ್ಷ ಮತ್ತು ಜಾತಿಗಳ ನಡುವೆ ವೈಮನಸ್ಸು ಮುಂದುವರಿದಿವೆ. ಜಾತಿ ಮತ್ತು ದ್ವೇಷವನ್ನು ಬಿತ್ತಿ ಪೋಷಿಸುವ ಪಟ್ಟಭದ್ರ ಹಿತಾಸಕ್ತಿಗಳೂ ನಮ್ಮ ನಡುವೆಯೇ ಇವೆ ಎಂದು ಆತಂಕ ವ್ಯಕ್ತಪಡಿಸಿದರು.

“ಇವನಾರವ ಇವನಾರವ ಇವನಾರವನೆಂದೆನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನ್ನಿರಯ್ಯ” ಎಂದು ಬಸವಣ್ಣನವರು ಅಂದೇ ಮಾನವೀಯತೆಯ ಮಹತ್ವವನ್ನು ಸಾರಿದ್ದರು. ಬಸವಣ್ಣನವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ನಮ್ಮ ಸಂವಿಧಾನದಲ್ಲಿಯೂ ಪ್ರತಿಫಲಿಸಿವೆ. ಸುಮಾರು 2,500 ವರ್ಷಗಳ ಹಿಂದೆ ಬುದ್ಧರು, 900 ವರ್ಷಗಳ ಹಿಂದೆ ಬಸವಣ್ಣನವರು ಪ್ರತಿಪಾದಿಸಿದ ಸಮಾನತೆಯ ಚಿಂತನೆಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಲ್ಲಿಯೂ ಕಾಣಬಹುದು ಎಂದರು.

ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಓದಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಉದ್ದೇಶದಿಂದಲೇ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಯೊಂದು ಶಾಲೆ ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಕೆಲಸ ಮಾಡಿದ್ದೆ ಎಂದರು.

ಬಸವಣ್ಣನವರ ‘ಕಾಯಕವೇ ಕೈಲಾಸ’ ಮತ್ತು ದಾಸೋಹದ ತತ್ವಗಳು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಮಹತ್ವವನ್ನು ಸಾರುತ್ತವೆ. ಯಾರೊಬ್ಬರೂ ಶ್ರಮವಿಲ್ಲದೆ ಬದುಕಬಾರದು, ದುಡಿಮೆಯ ಫಲ ಕೆಲವರಿಗಷ್ಟೇ ಸೀಮಿತವಾಗಬಾರದು ಎಂಬುದು ಬಸವಣ್ಣನವರ ಚಿಂತನೆಯಾಗಿತ್ತು ಎಂದರು.

ಜಾತಿ, ವರ್ಗ ಮತ್ತು ಲಿಂಗಭೇದವಿಲ್ಲದ ಸಮಾಜ ನಿರ್ಮಾಣದ ಉದ್ದೇಶದಿಂದ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಪ್ರಜಾಸತ್ತಾತ್ಮಕ ಚಿಂತನೆಗಳಿಗೆ ಮಹತ್ವದ ವೇದಿಕೆಯಾಗಿತ್ತು. ಇಂದಿನ ಸಂಸತ್ತು ಮತ್ತು ವಿಧಾನಸಭೆಗೆ ಹೋಲಿಸಬಹುದಾದ ಈ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ವರ್ಗದವರಿಗೂ ಭಾಗವಹಿಸುವ ಅವಕಾಶವಿತ್ತು. ವಿಶೇಷವಾಗಿ ಮಹಿಳೆಯರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದರು ಎಂದರು.

ಅನುಭವ ಮಂಟಪದ ಅಧ್ಯಕ್ಷರಾಗಿ ಅಲ್ಲಮಪ್ರಭುಗಳು ಕಾರ್ಯನಿರ್ವಹಿಸಿದ್ದರು. ಸಮಾಜದ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದವರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶ ಕಲ್ಪಿಸಲಾಗಿತ್ತು. ಇದು ಬಸವಣ್ಣನವರ ಸಮಾನತೆಯ ಆಶಯಕ್ಕೆ ಸಾಕ್ಷಿಯಾಗಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಭವ ಮಂಟಪದ ಪುನರ್ನಿರ್ಮಾಣಕ್ಕಾಗಿ ಗೋ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೆ. ಸಮಿತಿಯ ವರದಿ ಆಧರಿಸಿ ಅನುಭವ ಮಂಟಪದ ನಿರ್ಮಾಣಕ್ಕಾಗಿ ₹280 ಕೋಟಿ ಬಿಡುಗಡೆ ಮಾಡಿದ್ದೆ. ನಮ್ಮ ಆಡಳಿತಾವಧಿಯಲ್ಲಿಯೇ ಈ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಅನುಭವ ಮಂಟಪದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ ಎಂದರು.

2013ರ ಮೇ 13ರಂದು ಬಸವ ಜಯಂತಿಯ ದಿನವೇ ನಾನು ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಬಸವ ಜಯಂತಿಯಂದೇ ಅಧಿಕಾರ ಸ್ವೀಕರಿಸುವ ಅವಕಾಶ ದೊರೆತಿದ್ದು ಕಾಕತಾಳೀಯವಾಗಿದ್ದರೂ ನನ್ನ ಬದುಕಿನಲ್ಲಿ ಸಂತೋಷ ತಂದ ಮಹತ್ವದ ಸಂಗತಿಯಾಗಿದೆ. ಪರಸ್ಪರ ಪ್ರೀತಿ, ಸಹಬಾಳ್ವೆ, ಸಮಾನತೆ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜವನ್ನು ನಿರ್ಮಿಸುವುದೇ ವಿಶ್ವಗುರು ಬಸವಣ್ಣನವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ಧರಾಮಯ್ಯ ಹೇಳಿದರು.

ಶ್ರೀ ಕ್ಷೇತ್ರ ಸುತ್ತೂರು ಮಠದ ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ, ಸಚಿವರಾದ ಈಶ್ವರ ಖಂಡ್ರೆ, ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ, ಶಾಸಕರಾದ ರವಿಶಂಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular