ನೋಯ್ಡಾದ ಕಾರ್ಖಾನೆ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳ, ಹರಿಯಾಣ ರಾಜ್ಯದ ವೇತನಕ್ಕೆ ಸಮಾನತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಇತರ ಸೌಲಭ್ಯಗಳಿಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಆಸ್ತಿಪಾಸ್ತಿ ಹಾನಿಯಾದ ವರದಿಗಳಾಗಿವೆ.
ವೇತನ ತಾರತಮ್ಯ ಮತ್ತು ಕೆಲಸದ ಸ್ಥಳದಲ್ಲಿನ ಶೋಷಣೆಯನ್ನು ವಿರೋಧಿಸಿ ನೋಯ್ಡಾದ ಸಾವಿರಾರು ಕಾರ್ಖಾನೆ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಕನಿಷ್ಠ ವೇತನವನ್ನು ₹20,000 ಕ್ಕೆ ಏರಿಸಬೇಕು ಹಾಗೂ ದಿನದ ಕೆಲಸದ ಅವಧಿಯನ್ನು 8 ಗಂಟೆಗಳಿಗೆ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ನೆರೆಯ ಹರಿಯಾಣ ರಾಜ್ಯಕ್ಕೆ ಸಮಾನವಾದ ವೇತನ ಮತ್ತು ಮಹಿಳಾ ಕಾರ್ಮಿಕರಿಗೆ ಸುರಕ್ಷತೆಯನ್ನು ಒತ್ತಾಯಿಸಿ ನಡೆಸುತ್ತಿರುವ ಈ ಹೋರಾಟವು ಕೆಲವು ಕಡೆ ಹಿಂಸಾಚಾರಕ್ಕೆ ತಿರುಗಿದ್ದು, ಆಡಳಿತ ಮಂಡಳಿಯ ಭರವಸೆಗಳು ಹುಸಿಯಾಗಿರುವುದು ಕಾರ್ಮಿಕರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.
ವೇತನ ಹೆಚ್ಚಳ ಮತ್ತು ಸಮಾನತೆ : ಉತ್ತರ ಪ್ರದೇಶದ ವೇತನವು ನೆರೆಯ ಹರಿಯಾಣ ರಾಜ್ಯಕ್ಕಿಂತ ಕಡಿಮೆ ಇದೆ ಎಂಬುದು ಕಾರ್ಮಿಕರ ಮುಖ್ಯ ಅಸಮಾಧಾನ. ಹರಿಯಾಣ ಸರ್ಕಾರವು ಇತ್ತೀಚೆಗೆ ವೇತನವನ್ನು ಶೇ. ೩೫ ರಷ್ಟು ಹೆಚ್ಚಿಸಿದೆ, ಆದ್ದರಿಂದ ನೋಯ್ಡಾದಲ್ಲೂ ಸಮಾನ ವೇತನ ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.
ಕನಿಷ್ಠ ವೇತನ ₹೨೦,೦೦೦: ಪ್ರಸ್ತುತ ಅನೇಕ ಕಾರ್ಮಿಕರು ₹೧೫,೦೦೦ ಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಇದನ್ನು ₹೨೦,೦೦೦ ಕ್ಕೆ ಏರಿಸಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ.
ಕೆಲಸದ ಅವಧಿ: ಪ್ರಸ್ತುತ ದಿನಕ್ಕೆ ೧೨ ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದು, ಇದನ್ನು ಅಧಿಕೃತವಾಗಿ ೮ ಗಂಟೆಗಳ ಶಿಫ್ಟ್ಗೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇತರ ಸೌಲಭ್ಯಗಳು: ಸೂಕ್ತ ಓವರ್ಟೈಮ್ (Overtime) ಭತ್ಯೆ, ವಾರ್ಷಿಕ ಬೋನಸ್ ಮತ್ತು ವಾರಕ್ಕೊಂದು ಕಡ್ಡಾಯ ರಜೆ ನೀಡಬೇಕೆಂದು ಕಾರ್ಮಿಕರು ಮನವಿ ಮಾಡಿದ್ದಾರೆ.
ಪ್ರತಿಭಟನಾ ನಿರತ ಕಾರ್ಮಿಕರಲ್ಲಿ ಒಬ್ಬರಾದ ಲಕ್ಷ್ಮಿ ಎಂಬುವವರು ತಮ್ಮ ಅಳಲು ತೋಡಿಕೊಂಡಿದ್ದಾರೆ:”ನಮ್ಮ ಕಂಪನಿಯಲ್ಲಿ ನಮ್ಮನ್ನು ಶೋಷಿಸಲಾಗುತ್ತಿದೆ. ನಮಗೆ ಸರಿಯಾದ ಸಮಯಕ್ಕೆ ಊಟ ನೀಡುವುದಿಲ್ಲ ಮತ್ತು ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲ. ನಾವು ಕೇವಲ ಎರಡು ವಿಷಯಗಳನ್ನು ಕೇಳುತ್ತಿದ್ದೇವೆ: ಒಂದು ಓವರ್ಟೈಮ್ ಹಣ, ಮತ್ತೊಂದು ₹೨೦,೦೦೦ ಕನಿಷ್ಠ ವೇತನ ಎಂದು ಹೇಳಿದ್ದಾರೆ. ಜಿಲ್ಲಾಡಳಿತವು ಈ ಹಿಂದೆ ಭರವಸೆಗಳನ್ನು ನೀಡಿದ್ದರೂ, ಅವುಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿರುವುದರಿಂದ ಕಾರ್ಮಿಕರು ಮತ್ತು ಆಡಳಿತದ ನಡುವೆ ಅಪನಂಬಿಕೆ ಹೆಚ್ಚಾಗಿದೆ.

