ಗದಗ: ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಸಂಸದ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮನಸ್ಸು ಯಾರು ಗೆಲ್ಲುತ್ತಾರೆ ಅವರು ಸಿಎಂ ಆಗುತ್ತಾರೆ. ಇದು ಪ್ರಜಾಪಭುತ್ವದ ವ್ಯವಸ್ಥೆಗೆ ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ವಿಪರೀತ ಅಧಿಕಾರದ ಆಸೆಯಿಂದ ನಾಯಕರಲ್ಲಿ ತಿಕ್ಕಾಟ ಶುರುವಾಗಿದೆ. ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಮೂರು ಬಾರಿ ಗೆದ್ದಿದ್ದೇವೆ ನಮಗೆ ಸಚಿವ ಸ್ಥಾನ ಕೊಡಿ ಅಂತ ಕೇಳುತ್ತಾರೆ. ಹೊಸಬರು ತಮಗೂ ಸಚಿವ ಸ್ಥಾನ ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಪಯತ್ನ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಬಹಳ ಹಿರಿಯವರು ಅವರು ತಮಗೆ ನ್ಯಾಯ ಸಮ್ಮತವಾಗಿ ಸಿಎಂ ಸ್ಥಾನ ಸಿಗಬೇಕು ಎಂಬ ನೋವು ಅವರ ಮನಸಿನಲ್ಲಿದೆ. ಅದಕ್ಕಾಗಿ ಆ ಭಾವನೆ ವ್ಯಕ್ತಪಡಿಸಿದ್ದಾರೆ ಎಂದರು.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹೈಕಮಾಂಡ್ ಅಂದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅಂತಾರೆ, ಮಲ್ಲಿಕಾರ್ಜುನ ಖಗೆರ್ಯವರು ಹೈಕಮಾಂಡ್ ಅಂದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಂತಾರೆ ಇದೊಂದು ಕುಟುಂಬ ಆಧಾರಿತ ಪಕ್ಷ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮನಸ್ಸು ಯಾರು ಗೆಲ್ಲುತ್ತಾರೆ ಅವರು ಸಿಎಂ ಆಗುತ್ತಾರೆ. ಇದು ಪ್ರಜಾಪಭುತ್ತದ ವ್ಯವಸ್ಥೆಗೆ ನಾಚಿಗೇಡಿನ ಸಂಗತಿ, ಬಹಳಷ್ಟು ಪ್ರಜಾಪಭುತ್ವದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ತಮ್ಮ ಪಕ್ಷದ ಅಂತರಿಕ ಪ್ರಜಾಪಭುತ್ವವವನ್ನೇ ಸಂಪೂರ್ಣವಾಗಿ ಕೊಲೆ ಮಾಡಿರುವುದು ಎದ್ದು ಕಾಣಿಸುತ್ತದೆ ಎಂದು ಹೇಳಿದರು.
ಈ ಸರ್ಕಾರದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಇವರನ್ನು ಆಯ್ಕೆ ಮಾಡಿರುವ ಜನರು ರೋಸಿ ಹೋಗಿದ್ದಾರೆ. ಆಯ್ಕೆ ಮಾಡಿದ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಯಾವಾಗ ರಾಜಕೀಯ ತಿಕ್ಕಾಟ ಪ್ರಾರಂಭ ಆಗುತ್ತದೆ. ಸರ್ಕಾರ ಸಂಪೂರ್ಣ ಸ್ಥಗಿತವಾಗಿದೆ. ಯಾವುದೇ ಕೆಲಸ ಆಗಿಲ್ಲ ಎಂದರು.
ಸಿದ್ದರಾಮಯ್ಯ ಅವರು ಕಳೆದ ಬಜೆಟ್ ನಲ್ಲಿ ಒದಗಿಸಿದ್ದನ್ನು ಸುಮಾರು 14 ಸಾವಿರ ಕೋಟಿ ಬಳಕೆ ಮಾಡಿಲ್ಲ. ಅದರ ಹಿಂದಿನ ವರ್ಷವೂ ಕೂಡ ಸುಮಾರು 10 ಸಾವಿರ ಕೋಟಿ ಬಳಕೆ ಮಾಡಿಲ್ಲ. ರಾಜಕೀಯವಾಗಿ ತಿಕ್ಕಾಟ ಮಾಡಿದರೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ. ಸಿಎಂ ಒಂದು ಹೇಳಿದರೆ ಡಿಸಿಎಂ ಒಂದು ಹೇಳುತ್ತಾರೆ, ಜನರ ದೃಷ್ಟಿಯಿಂದ ಈ ಸರ್ಕಾರ ಸಂಪೂರ್ಣ ನಿಂತು ಹೋಗಿದೆ ಎಂದರು.

