ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚಿಸುತ್ತಿದ್ದ ತಾಯಿ ಹಾಗೂ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ವರನ ಹುಡುಕಾಟ ನಡೆಸುತ್ತಿದ್ದ ಕುಟುಂಬಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ತಾಯಿ-ಮಗ ಇದೀಗ ಬೆಂಗಳೂರು ಪೊಲೀಸರ ಅತಿಥಿಗಳಾಗಿದ್ದಾರೆ.
ಆಡುಗೋಡಿ ಪೊಲೀಸರು ತಾಯಿ ಮಗನನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಲಾವತಿ ಹಾಗೂ ಮಗ ಡಾ. ಪ್ರದೀಪ್ ಜೋಸೆಫ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕಳೆದ ಮೂರು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು. ಇದೀಗ ಕೇರಳದ ವಯನಾಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.
ಮೂಲತಃ ಮೈಸೂರಿನವರಾದ ಈ ತಾಯಿ-ಮಗ, ಶಾದಿ ಡಾಟ್ ಕಾಂನಂತಹ ವೆಬ್‌ಸೈಟ್‌ಗಳಲ್ಲಿ ಪ್ರೊಫೈಲ್ ಸೃಷ್ಟಿಸಿ ತಮ್ಮನ್ನು ಶ್ರೀಮಂತರೆಂದು ಬಿಂಬಿಸಿಕೊಳ್ಳುತ್ತಿದ್ದರು. ಪ್ರದೀಪ್ ಜೋಸೆಫ್ ತಾನು ಪಿಎಚ್‌ಡಿ ಮಾಡಿರುವ ಡಾಕ್ಟರೇಟ್ ಪದವೀಧರ ಎಂದು ನಂಬಿಸಿ, ಮೈಸೂರಿನ ಬಾಡಿಗೆ ಬಂಗಲೆಯನ್ನು ತನ್ನದೇ ಎಂದು ಬಿಲ್ಡಪ್ ನೀಡುತ್ತಿದ್ದ. ಮದುವೆ ಮಾತುಕತೆ ನಡೆದು ಸಂಬಂಧ ಕುದುರಿದ ನಂತರ, “ತುರ್ತಾಗಿ ಹಣದ ಅಗತ್ಯವಿದೆ” ಎಂದು ವಧುವಿನ ಕಡೆಯವರಿಂದ ಲಕ್ಷಾಂತರ ರೂಪಾಯಿ ಪಡೆದು ಪರಾರಿಯಾಗುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು.
ಬೆಂಗಳೂರು ಮೂಲದ ಕುಟುಂಬವೊಂದು ತಮ್ಮ ಮಗಳ ಮದುವೆಗೆ ಡಾ.ಪ್ರದೀಪ್ ನ ಬಣ್ಣದ ಮಾತುಗಳನ್ನು ನಂಬಿ ಮದುವೆಗೆ ಸಿದ್ಧತೆ ಮಾಡಿಕೊಂಡಿತ್ತು. ಅಷ್ಟೇ ಅಲ್ಲದೆ, ಬಂಧು-ಮಿತ್ರರಿಗೆ ಆಹ್ವಾನ ಪತ್ರಿಕೆಯನ್ನೂ ಹಂಚಿ ಮುಗಿಸಿತ್ತು. ಈ ಹಂತದಲ್ಲಿ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಾಕ್ಷಿ ಸಮೇತ ಈತನ ಅಸಲಿಯತ್ತನ್ನು ವಧುವಿನ ಕುಟುಂಬಕ್ಕೆ ತಿಳಿಸಿದಾಗ ಆಘಾತಕಾರಿ ಸತ್ಯ ಹೊರಬಿದ್ದಿದೆ. ಈ ಇಬ್ಬರೂ ಈಗಾಗಲೇ 10ಕ್ಕೂ ಹೆಚ್ಚು ಯುವತಿಯರ ಕುಟುಂಬಗಳಿಗೆ ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ವಧುವಿನ ಕುಟುಂಬ ನೀಡಿದ ದೂರಿನನ್ವಯ ಆಡುಗೋಡಿ ಪೊಲೀಸರು ಮೈಸೂರಿಗೆ ತೆರಳಿ ದಾಳಿ ನಡೆಸಿದಾಗ, ಆರೋಪಿಗಳು ಕಾರಿನಲ್ಲಿ ಎಸ್ಕೇಪ್ ಆಗಿದ್ದರು. ಕೊನೆಗೂ ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ವಯನಾಡಿನಲ್ಲಿ ತಾಯಿ-ಮಗನನ್ನು ಬಂಧಿಸಿದ್ದಾರೆ.

