ಬೆಂಗಳೂರು: ಶಾಲೆಗಳು ಜ್ಞಾನದ ದೇಗುಲಗಳು. ಆದರೆ ಇತ್ತೀಚಿನ ದಿನಗಳಲ್ಲಿ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡು ಹಾಗೂ ನೃತ್ಯಗಳ ಪ್ರದರ್ಶನ ಹೆಚ್ಚಾಗುತ್ತಿರುವುದಕ್ಕೆ ಶಿಕ್ಷಣ ಇಲಾಖೆ ಈಗ ಬ್ರೇಕ್ ಹಾಕಿದೆ. ಈ ಸಂಬಂಧ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಅನ್ವಯವಾಗುವಂತೆ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಶಿಕ್ಷಣದ ಪಾವಿತ್ರ್ಯತೆಗೆ ಧಕ್ಕೆ:
ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ನೀಡಿರುವ ಈ ಆದೇಶದಲ್ಲಿ, ಮಕ್ಕಳ ಮೇಲೆ ಅಶ್ಲೀಲ ಹಾಡುಗಳು ಕೆಟ್ಟ ಪರಿಣಾಮ ಬೀರುತ್ತಿವೆ ಮತ್ತು ಇದು ಶಿಕ್ಷಣದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ದೂರಿನ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಇಲಾಖೆ ನೀಡಿರುವ 5 ಪ್ರಮುಖ ಗೈಡ್ಲೈನ್ಸ್:
ಅಶ್ಲೀಲತೆಗೆ ಕಟ್ಟುನಿಟ್ಟಿನ ನಿಷೇಧ: ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಾವುದೇ ಕಾರಣಕ್ಕೂ ಅಶ್ಲೀಲ ಹಾಡು ಅಥವಾ ನೃತ್ಯಗಳನ್ನು ಪ್ರದರ್ಶಿಸುವಂತಿಲ್ಲ.
ರಾಷ್ಟ್ರಾಭಿಮಾನಕ್ಕೆ ಆದ್ಯತೆ: ಮಕ್ಕಳಿಗೆ ಸ್ಫೂರ್ತಿ ನೀಡುವ, ಕನ್ನಡ ನಾಡಿನ ಹಿರಿಮೆ-ಗರಿಮೆ ಸಾರುವ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಹಾಡುಗಳನ್ನೇ ಆಯ್ಕೆ ಮಾಡಬೇಕು.
ಸಭ್ಯ ಉಡುಪು ಕಡ್ಡಾಯ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸಭ್ಯ ಉಡುಪುಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
ಹೊಣೆಗಾರಿಕೆ: ಹಾಡು ಮತ್ತು ನೃತ್ಯಗಳ ಆಯ್ಕೆಯಲ್ಲಿ ಯಾವುದೇ ತಪ್ಪುಗಳು ಸಂಭವಿಸಿದರೆ ಅದಕ್ಕೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯೇ ನೇರ ಹೊಣೆಯಾಗಲಿದೆ.
ಕಾನೂನು ಕ್ರಮ: ಒಂದು ವೇಳೆ ಸುತ್ತೋಲೆಯನ್ನು ಉಲ್ಲಂಘಿಸಿ ಅಶ್ಲೀಲ ನೃತ್ಯಗಳಿಗೆ ಅವಕಾಶ ನೀಡಿದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು.

