ಆಧಾರ್ ಕಾರ್ಡ್ ವ್ಯಕ್ತಿಯ ಎಲ್ಲಾ ಪ್ರಮುಖ ವಿವರಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಇದನ್ನು ಸರ್ಕಾರಿ ಯೋಜನೆಗಳಿಗೆ ಮತ್ತು ಇತರ ಸೇವೆಗಳಿಗೆ ಗುರುತಿನ ಚೀಟಿಯಾಗಿ ಬಳಸಲಾಗುತ್ತದೆ. ಆದರೆ, ಆಧಾರ್ ಕಾರ್ಡ್ ಅನ್ನು ಹುಟ್ಟಿದ ದಿನಾಂಕದ (Date of Birth) ಪುರಾವೆಯಾಗಿ ಬಳಸಬಹುದು ಎಂದು ಅನೇಕರು ಭಾವಿಸುತ್ತಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಆಧಾರ್ ಕಾರ್ಡ್ (Aadhaar Card)
ಆಧಾರ್ ಕಾರ್ಡ್ ಕುರಿತು ಕೇಂದ್ರ ಸರ್ಕಾರ ಪ್ರಮುಖ ಘೋಷಣೆ ಮಾಡಿದೆ. ಈ ಕಾರ್ಡ್‌ನಲ್ಲಿ ವ್ಯಕ್ತಿಯ ಹೆಸರು, ವಿಳಾಸ ಮತ್ತು ಹುಟ್ಟಿದ ದಿನಾಂಕದಂತಹ ವೈಯಕ್ತಿಕ ವಿವರಗಳಿರುತ್ತವೆ. ಎಲ್ಲಾ ವಿವರಗಳು ಒಂದೇ ಕಡೆ ಇರುವುದರಿಂದ ದಾಖಲೆಗಳ ಪರಿಶೀಲನೆಗಾಗಿ ಆಧಾರ್ ಅನ್ನು ಹೆಚ್ಚಾಗಿ ಕೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಹುಟ್ಟಿದ ದಿನಾಂಕದ ಪುರಾವೆಯಾಗಿ ಆಧಾರ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಈ ವಿಷಯದ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಿದ್ದು, ಆಧಾರ್ ಕೇವಲ ವ್ಯಕ್ತಿಯ ಗುರುತಿನ ಚೀಟಿಯೇ ಹೊರತು, ಹುಟ್ಟಿದ ದಿನಾಂಕವನ್ನು ದೃಢೀಕರಿಸುವ ದಾಖಲೆಯಲ್ಲ ಎಂದು ತಿಳಿಸಿದೆ. ಆಧಾರ್ ನೋಂದಣಿ ಸಮಯದಲ್ಲಿ ನೀಡಲಾಗುವ ಮಾಹಿತಿಯು ಸ್ವಯಂ ಘೋಷಿತ (Self-declaration) ಮಾಹಿತಿಯ ಮೇಲೆ ಆಧಾರಿತವಾಗಿರುವುದರಿಂದ, ಇದನ್ನು ಜನ್ಮ ದಿನಾಂಕದ ಅಧಿಕೃತ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದು ಜನ್ಮ ದಿನಾಂಕದ ಪುರಾವೆಯಲ್ಲ
ವಯಸ್ಸನ್ನು ದೃಢೀಕರಿಸಲು ಇನ್ನು ಮುಂದೆ ಜನ್ಮ ಪ್ರಮಾಣಪತ್ರ (Birth Certificate) ಅಥವಾ ಹತ್ತನೇ ತರಗತಿಯ ಅಂಕಪಟ್ಟಿ (10th Certificate) ತೋರಿಸಬೇಕು ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಈ ಬಗ್ಗೆ ಯುಐಡಿಎಐ (UIDAI) ಪ್ರಕಟಣೆ ಹೊರಡಿಸಿದೆ.
ಆಧಾರ್ ಕಾಯ್ದೆ-2016 ರ ಪ್ರಕಾರ, ಆಧಾರ್ ಎನ್ನುವುದು ವ್ಯಕ್ತಿಯ ಬಯೋಮೆಟ್ರಿಕ್ ಮತ್ತು ಡೆಮೊಗ್ರಾಫಿಕ್ ಡೇಟಾ ಆಧಾರಿತ ಗುರುತಿನ ಪುರಾವೆಯಾಗಿದೆ.
ಆಧಾರ್‌ನಲ್ಲಿರುವ ಜನ್ಮ ದಿನಾಂಕದ ಬಗ್ಗೆ ವಿವಾದ ಉಂಟಾದಲ್ಲಿ, ಅದನ್ನು ಸಾಬೀತುಪಡಿಸುವ ಜವಾಬ್ದಾರಿ ಸಂಪೂರ್ಣವಾಗಿ ಕಾರ್ಡ್‌ದಾರರದ್ದಾಗಿರುತ್ತದೆ ಎಂದು UIDAI ತಿಳಿಸಿದೆ.
ಆಧಾರ್ ಪಡೆಯುವಾಗ ಸರಿಯಾದ ದಾಖಲೆ ನೀಡದಿದ್ದರೆ, ಸಿಸ್ಟಮ್ ಸ್ವಯಂಚಾಲಿತವಾಗಿ ಜನವರಿ 1 ಅನ್ನು ಹುಟ್ಟಿದ ದಿನಾಂಕವೆಂದು ತೆಗೆದುಕೊಳ್ಳುತ್ತದೆ. ಹೀಗಾಗಿ ಇದನ್ನು ಅಧಿಕೃತ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ.
UIDAI ಹೇಳಿದ್ದೇನು?
ಆಧಾರ್ ಕಾರ್ಡ್ ಅನ್ನು ಬರ್ತ್ ರಿಜಿಸ್ಟ್ರಿ ಅಥವಾ ಜನ್ಮ ದಾಖಲೆಯಾಗಿ ನೋಡಲು ಸಾಧ್ಯವಿಲ್ಲ ಎಂದು UIDAI ಹೇಳುತ್ತಿದೆ. ಇದು ಕೇವಲ ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು ಮತ್ತು ನಾಗರಿಕ ಸೇವೆಗಳನ್ನು ಪಡೆಯಲು ಒಂದು ಗುರುತಿನ ಸಾಧನವಾಗಿ ಮಾತ್ರ ಇರುತ್ತದೆ. ಪಾಸ್‌ಪೋರ್ಟ್ ಪಡೆಯಲು ಅಥವಾ ಇನ್ಶೂರೆನ್ಸ್ ಕ್ಲೈಮ್ ಮಾಡಲು ಆಧಾರ್ ಕಾರ್ಡ್‌ನೊಂದಿಗೆ ಹತ್ತನೇ ತರಗತಿಯ ಪ್ರಮಾಣಪತ್ರ ಅಥವಾ ಜನ್ಮ ಪ್ರಮಾಣಪತ್ರವನ್ನು ಇಟ್ಟುಕೊಳ್ಳುವುದು ಉತ್ತಮ.

