ಬಳ್ಳಾರಿ: ಅಜ್ಜಿಯನ್ನು ಕೊಲೆಗೈದ ಮೊಮ್ಮಗ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಅಜ್ಜಿ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಅಜ್ಜಿ ಮೃತಪಟ್ಟಿದ್ದಾರೆ ಎಂಬ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಇದು ಸಿಲಿಂಡರ್ ಸ್ಫೋಟವಲ್ಲ ಕೊಲೆ ಎಂಬುದು ಬಯಲಾಗಿದೆ. ಅಜ್ಜಿಯನ್ನು ಕೊಂದಿರುವುದು ಯಾರೋ ಹೊರಗಿನವರು ಅಲ್ಲ, ಸ್ವಂತ ಮೊಮ್ಮಗನೇ ಎನ್ನುವುದು ಮತ್ತೊಂದು ಆಘಾತಕಾರಿ ಸಂಗತಿ.
ಬಳ್ಳಾರಿಯ ಪಿ.ಡಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೆಕಲ್ಲು ಗ್ರಾಮದಲ್ಲಿ ಮಾರ್ಚ್ 21ರಂದು ಈರಮ್ಮ (58) ಸಾವನ್ನಪ್ಪಿದ್ದರು. ಮೊದಲಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವೇಳೆ ಇದು ಕೊಲೆ ಎಂಬುದು ದೃಢಪಟ್ಟಿದೆ.
ಮಹಿಳೆಯನ್ನು ಮೊದಲು ಹರಿತವಾದ ಆಯುಧಗಳಿಂದ ಇರಿದು ಕೊಲೆ ಮಾಡಲಾಗಿದೆ. ನಂತರ ಪ್ರಕರಣವನ್ನು ಮುಚ್ಚಿಹಾಕಲು ಪೆಟ್ರೋಲ್ ಸುರಿದು ಸುಡಲಾಗಿದೆ ಎಂಬುದು ತಿಳಿದುಬಂದಿದೆ.
ಆಸ್ತಿ ವಿಚಾರಕ್ಕೆ ಮಹಿಳೆಯನ್ನು ಹರಿತವಾದ ಸಾಧನಗಳಿಂದ ಇರಿದು, ಬಳಿಕ ಪೆಟ್ರೋಲ್ ಸುರಿದು ಸುಡಲಾಗಿದೆ ಎಂದು ಎಸ್‌ಪಿ ಸುಮನ್ ಡಿ.ಪಿ ಹೇಳಿದ್ದಾರೆ. ಮೊಮ್ಮಗ ವೀರೇಂದ್ರ ಈ ಕೃತ್ಯ ಎಸಗಿದ್ದು, ಬಳಿಕ ನಾಪತ್ತೆಯಾಗಿದ್ದಾನೆ.
ಸದ್ಯ ನಾಪತ್ತೆಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದು, ಈ ಹತ್ಯೆಯಲ್ಲಿ ಇನ್ನಿಬ್ಬರು ಸಹಕಾರ ನೀಡಿರುವುದು ಕೂಡ ಬೆಳಕಿಗೆ ಬಂದಿದೆ.

