HomeIndiaಎನ್‌ಡಿಎ ಅಭ್ಯರ್ಥಿಗಳ ಹೆಸರು ಮತದಾರರ ಪಟ್ಟಿಯಲ್ಲಿಯೇ ಇಲ್ಲ!

ಎನ್‌ಡಿಎ ಅಭ್ಯರ್ಥಿಗಳ ಹೆಸರು ಮತದಾರರ ಪಟ್ಟಿಯಲ್ಲಿಯೇ ಇಲ್ಲ!

ಕೇರಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. 140 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಉತ್ಸಾಹದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವಿದೆ.

ಆದರೆ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವೊಂದರ ಇಬ್ಬರು ಅಭ್ಯರ್ಥಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಅಂತಿಮವಾಗಿ ಪಕ್ಷ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ.

ಅಭ್ಯರ್ಥಿಗಳ ಹೆಸರು ನಾಪತ್ತೆ: ಎನ್‌ಡಿಎ ಮೈತ್ರಿಕೂಟದ ಅಂಗ ಪಕ್ಷವಾದ ಟ್ವೆಂಟಿ20 ಪಕ್ಷ ಇಬ್ಬರನ್ನು ಚುನಾವಣಾ ಕಣಕ್ಕಿಳಿಸಲು ತೀರ್ಮಾನಿಸಿತ್ತು. ಪಕ್ಷದ ಅಭ್ಯರ್ಥಿಯಾಗಿ ಪೆರುಂಬವೂರ್ ಕ್ಷೇತ್ರದಿಂದ ನಟಿ ಲಕ್ಷ್ಮೀ ಪ್ರಿಯಾ ಮತ್ತು ಎಟ್ಟುಮನೂರ್ ಕ್ಷೇತ್ರದಿಂದ ವೀನಾ ನಾಯರ್ ಕಣಕ್ಕಿಳಿಯಲು ಬಯಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈ ಇಬ್ಬರು ಸಂಭವನೀಯ ಅಭ್ಯರ್ಥಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 23 ಕೊನೆಯ ದಿನವಾಗಿತ್ತು. ಆದ್ದರಿಂದ ಪಕ್ಷ ಅಭ್ಯರ್ಥಿಗಳನ್ನೇ ಬದಲಾವಣೆ ಮಾಡಿದ್ದು, ಬೇರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಡ್ಡಾಯವಾಗಿ ಹೆಸರು ಇರಬೇಕಿದೆ: 1951ರ ಜನಪ್ರತಿನಿಧಿ ಕಾಯ್ದೆ ಅನ್ವಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರಾದರೂ ಬಯಸಿದರೆ ಅಭ್ಯರ್ಥಿಯ ಹೆಸರು ರಾಜ್ಯದ ಯಾವುದಾದರೂ ಒಂದು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇರಬೇಕಿದೆ. ಆದರೆ ಲಕ್ಷ್ಮೀ ಪ್ರಿಯಾ ಮತ್ತು ವೀನಾ ನಾಯರ್ ಅವರ ಹೆಸರು ಪಟ್ಟಿಯಲ್ಲಿ ಇಲ್ಲ.

ವೀನಾ ನಾಯರ್ ವಿಳಾಸ ಬದಲಾವಣೆ ಕಾರಣಕ್ಕೆ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟು ಹೋಗಿದೆ ಎಂದು ಹೇಳಿದ್ದಾರೆ. ಲಕ್ಷ್ಮೀ ಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಮತದಾನ ಮಾಡಿದ್ದೆವು. ಈಗ ಎಸ್‌ಐಆರ್ ಬಳಿಕ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿದೆ ಎಂದು ಹೇಳಿದ್ದಾರೆ.

ಇಬ್ಬರು ಸಹ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೊನೆಯ ಕ್ಷಣದಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಚುನಾವಣಾಧಿಕಾರಿಗಳು ಈಗ ಸೇರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಇಬ್ಬರು ಸಹ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ.

ಅಂತಿಮವಾಗಿ ಟ್ವೆಂಟಿ20 ಪಕ್ಷವು ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ತೀರ್ಮಾನ ಕೈಗೊಂಡು ಎಟ್ಟುಮನೂರ್ ಕ್ಷೇತ್ರದಿಂದ ಅತಿರಾ ಡಿ.ನಾಯರ್ ಮತ್ತು ಪೆರಂಬವೂರ್ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಲ್ಲಿದ್ದ ಜಿಬಿ ವರ್ಗೀಸ್ ಪತ್ತಿಕ್ಕಲ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಟ್ವೆಂಟಿ20 ಪಕ್ಷದ ಅಧ್ಯಕ್ಷ ಸಾಬು ಎಂ.ಜಾಕೋಬ್ ಮಾರ್ಚ್ 18ರಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಆಗ ವೀನಾ ನಾಯರ್ ಮತ್ತು ಲಕ್ಷ್ಮೀ ಪ್ರಿಯಾ ಅವರ ಹೆಸರುಗಳನ್ನು ಘೋಷಣೆ ಮಾಡಿದ್ದರು. ಆದರೆ ಈಗ ಇಬ್ಬರು ಸಹ ಅಭ್ಯರ್ಥಿಗಳಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular