ತಲೆನೋವು ಇಂದು ಪ್ರತಿಯೊಬ್ಬರನ್ನೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ. ಆದರೆ ಆಯುರ್ವೇದವು ತಲೆನೋವನ್ನು ಕೇವಲ ನೋವು ಎಂದು ನೋಡದೆ, ದೇಹದ ದೋಷಗಳ ಏರುಪೇರಿನ ಸಂಕೇತವಾಗಿ ಪರಿಗಣಿಸುತ್ತದೆ. ತಲೆನೋವಿನ ಮೂಲ ಕಾರಣವನ್ನು ಪತ್ತೆಹಚ್ಚಿ, ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವ ಮೂಲಕ ಇದನ್ನು ಶಾಶ್ವತವಾಗಿ ಗುಣಪಡಿಸಬಹುದು ಎಂದು ಆಯುರ್ವೇದ ಹೇಳುತ್ತದೆ.
ಆಯುರ್ವೇದದಲ್ಲಿ ತಲೆನೋವಿನ ವರ್ಗೀಕರಣ: ದೋಷಗಳ ಆಧಾರದ ಮೇಲೆ ತಲೆನೋವನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ:
ವಾತಜ ತಲೆನೋವು: ಅತಿಯಾದ ಕೆಲಸ, ನಿದ್ರೆಯ ಕೊರತೆ ಮತ್ತು ಒತ್ತಡದಿಂದ ಉಂಟಾಗುತ್ತದೆ. ಇದು ತೀವ್ರವಾದ ಮತ್ತು ಬಿಟ್ಟು ಬಿಟ್ಟು ಬರುವ ನೋವಾಗಿರುತ್ತದೆ.
ಪಿತ್ತಜ ತಲೆನೋವು: ಉರಿ ಅಥವಾ ಬಿಸಿ ಅನುಭವದೊಂದಿಗೆ ಬರುವ ನೋವು. ಇದು ಹಸಿವು, ಮಸಾಲೆ ಪದಾರ್ಥಗಳ ಸೇವನೆ ಅಥವಾ ಬಿಸಿಲಿಗೆ ಹೋದಾಗ ಉಲ್ಬಣಗೊಳ್ಳುತ್ತದೆ.
ಕಫಜ ತಲೆನೋವು: ತಲೆ ಭಾರವಾದ ಅನುಭವ, ಮೂಗು ಸೋರುವಿಕೆ ಮತ್ತು ಮಂದವಾದ ನೋವು ಇದರ ಲಕ್ಷಣ. ಇದು ಸಾಮಾನ್ಯವಾಗಿ ಸೈನಸ್ ಸಮಸ್ಯೆಗಳಿಂದ ಬರುತ್ತದೆ.
ಅಲ್ಲದೆ, ದಿನದ ಅವಧಿಗೆ ಅನುಗುಣವಾಗಿ ಬರುವ ನೋವನ್ನು ಸೂರ್ಯಾವರ್ತ (ಸೂರ್ಯ ಏರಿದಂತೆ ಹೆಚ್ಚುವ ನೋವು) ಮತ್ತು ತಲೆಯ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿರುವ ನೋವನ್ನು ಅರ್ಧಾವಭೇದಕ (ಮೈಗ್ರೇನ್) ಎಂದು ಕರೆಯಲಾಗುತ್ತದೆ.
ಪಂಚಕರ್ಮ ಮತ್ತು ಮದ್ದಿನ ಪಾತ್ರ:
ವಸಂತಿಕ ವಮನ: ವಸಂತ ಕಾಲದಲ್ಲಿ (ಮಾರ್ಚ್-ಏಪ್ರಿಲ್) ಮಾಡಲಾಗುವ ಈ ಶುದ್ಧೀಕರಣ ಚಿಕಿತ್ಸೆಯು ಕಫಕ್ಕೆ ಸಂಬಂಧಿಸಿದ ದೀರ್ಘಕಾಲದ ತಲೆನೋವುಗಳಿಗೆ ರಾಮಬಾಣ.
ನಸ್ಯ ಚಿಕಿತ್ಸೆ: ಮೂಗಿನ ಹೊಳ್ಳೆಗಳಿಗೆ ಔಷಧೀಯ ತೈಲಗಳನ್ನು (ಉದಾಹರಣೆಗೆ ಅಣು ತೈಲ ಅಥವಾ ಷಡ್‌ಬಿಂದು ತೈಲ) ಹಾಕುವ ಮೂಲಕ ಶಿರೋಭಾಗದ ನರಗಳನ್ನು ಬಲಪಡಿಸಲಾಗುತ್ತದೆ.
ಶಿರೋ ಅಭ್ಯಂಗ: ತಲೆಗೆ ಬಾಲಗುಳುಚ್ಯಾದಿ ಅಥವಾ ಅಸನಮಂಜಿಷ್ಠಾದಿ ತೈಲಗಳಿಂದ ಮಸಾಜ್ ಮಾಡುವುದರಿಂದ ಮೈಗ್ರೇನ್‌ನಂತಹ ದೀರ್ಘಕಾಲದ ನೋವು ಕಡಿಮೆಯಾಗುತ್ತದೆ.
ಜೀವನಶೈಲಿಯ ಬದಲಾವಣೆಗಳು: ಆಯುರ್ವೇದದ ಪ್ರಕಾರ ತಲೆನೋವಿನ ಚಿಕಿತ್ಸೆಯು ಕೇವಲ ಔಷಧಕ್ಕೆ ಸೀಮಿತವಲ್ಲ. ಸರಿಯಾದ ಸಮಯದಲ್ಲಿ ಮಲವಿಸರ್ಜನೆಯಾಗುವುದು ತಲೆನೋವು ನಿವಾರಣೆಗೆ ಅತಿ ಮುಖ್ಯ. ಮಲಬದ್ಧತೆ ಇರುವವರಿಗೆ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ, ರಾತ್ರಿ 7:30 ರೊಳಗೆ ಲಘು ಆಹಾರ ಸೇವನೆ ಮತ್ತು 6-8 ಗಂಟೆಗಳ ಕಾಲ ಶಾಂತವಾದ ನಿದ್ರೆ ತಲೆನೋವನ್ನು ತಡೆಯಲು ಸಹಾಯ ಮಾಡುತ್ತದೆ.

