ಟೊಮೆಟೊ ಅಂದ ತಕ್ಷಣ ನಮಗೆ ಸಾಂಬಾರ್ ರಸಂ ಅಥವಾ ಸಲಾಡ್ ನೆನಪಾಗುವುದು ಸಹಜ. ಆದರೆ ಇದೇ ಟೊಮೆಟೊ ಬಳಸಿ ಬಾಯಲ್ಲಿ ಇಟ್ಟರೆ ಕರಗುವಂತಹ ಅದ್ಭುತ ಸಿಹಿ ತಯಾರಿಸಬಹುದು ಎಂಬುದು ನಿಮಗೆ ಗೊತ್ತೇ? ಹೌದು ಕ್ಯಾರೆಟ್ ಹಲ್ವಾ ರುಚಿಯನ್ನೂ ಮೀರಿಸುವಂತಹ ವಿಭಿನ್ನ ಟೊಮೆಟೊ ಹಲ್ವಾ ಈಗ ಫುಡ್ ಪ್ರೇಮಿಗಳ ಹೊಸ ಸೆನ್ಸೇಷನ್
ಭಾರತೀಯರ ಅಡುಗೆಮನೆಯಲ್ಲಿ ಹಲ್ವಾಗೆ ವಿಶೇಷ ಸ್ಥಾನವಿದೆ. ಕ್ಯಾರೆಟ್ ಕುಂಬಳಕಾಯಿ ಅಥವಾ ಸೋರೆಕಾಯಿಯಿಂದ ಮಾಡಿದ ಹಲ್ವಾಗಳನ್ನು ನಾವೆಲ್ಲಾ ಸವಿದಿದ್ದೇವೆ. ಆದರೆ ಸಿಹಿ ಮತ್ತು ಲಘು ಹುಳಿಯ ವಿಶಿಷ್ಟ ಜುಗಲ್‌ಬಂದಿ ಹೊಂದಿರುವ ಈ ಟೊಮೆಟೊ ಹಲ್ವಾ ನಿಜಕ್ಕೂ ಒಂದು ಅಪರೂಪದ ರುಚಿ. ತಾಜಾ ಟೊಮೆಟೊ ಘಮಘಮಿಸುವ ತುಪ್ಪ ಮತ್ತು ಸಕ್ಕರೆಯ ಸಮ್ಮಿಲನದಲ್ಲಿ ಸಿದ್ಧವಾಗುವ ಈ ಹಲ್ವಾ ತಯಾರಿಸುವುದು ಅತಿ ಸುಲಭ.
ಇದರ ಹೈಲೈಟ್ ಅಂದ್ರೆ ನೋಡಲು ಪ್ರಸಿದ್ಧ ಕರಾಚಿ ಹಲ್ವಾ ದಂತೆ ಹೊಳೆಯುವ ಕೆಂಪು ಬಣ್ಣ ಮತ್ತು ಮೃದುವಾದ ವಿನ್ಯಾಸವನ್ನು ಹೊಂದಿದ್ದರೂ, ಇದರಲ್ಲಿ ಯಾವುದೇ ಹಿಟ್ಟಿನ (Flour) ಬಳಕೆ ಇರುವುದಿಲ್ಲ ಬಣ್ಣ ವಿನ್ಯಾಸ ಮತ್ತು ರುಚಿ ಈ ಮೂರರಲ್ಲೂ ಅತಿಥಿಗಳ ಮನಗೆಲ್ಲಲು ಈ ಹಲ್ವಾ ಬೆಸ್ಟ್ ಆಯ್ಕೆ.
ಟೊಮೆಟೊದ ಲಘು ಹುಳಿ ಅಂಶವು ತುಪ್ಪ, ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆತಾಗ ಒಂದು ವಿಶಿಷ್ಟವಾದ ಸಿಹಿ ಅನುಭವ ನೀಡುತ್ತದೆ. ಹಬ್ಬ ಹರಿದಿನಗಳಲ್ಲಿ ಅಥವಾ ಮನೆಗೆ ಅತಿಥಿಗಳು ಬಂದಾಗ ಬೋರಿಂಗ್ ಸಿಹಿ ತಿಂಡಿಗಳ ಬದಲು ಈ ಕೆಂಪು ಬಣ್ಣದ ಆಕರ್ಷಕ ಹಲ್ವಾ ನೀಡಿದರೆ ಅವರು ಖಂಡಿತ ಫಿದಾ ಆಗುತ್ತಾರೆ
ಬೇಕಾಗುವ ಸಾಮಗ್ರಿಗಳು:
ಚೆನ್ನಾಗಿ ಹಣ್ಣಾದ ಕೆಂಪು ಟೊಮೆಟೊ – 4 ರಿಂದ 5
ಸಕ್ಕರೆ – ರುಚಿಗೆ ತಕ್ಕಷ್ಟು
ತುಪ್ಪ – 3 ರಿಂದ 4 ಚಮಚ
ಏಲಕ್ಕಿ ಪುಡಿ – ಸ್ವಲ್ಪ
ಹಾಲು ಅಥವಾ ಕೋವಾ (ರುಚಿ ಹೆಚ್ಚಿಸಲು)
ಗೋಡಂಬಿ ದ್ರಾಕ್ಷಿ – ಅಲಂಕಾರಕ್ಕೆ
ತಯಾರಿಸುವ ವಿಧಾನ (Tomato Halwa Recipe):
ಟೊಮೆಟೊ ತಯಾರಿ: ಮೊದಲು ಹಣ್ಣಾದ ಟೊಮೆಟೊಗಳನ್ನು ತೊಳೆದು ಸಣ್ಣದಾಗಿ ಹೆಚ್ಚಿ ಅಥವಾ ಮಿಕ್ಸಿಯಲ್ಲಿ ರುಬ್ಬಿ ಪ್ಯೂರಿ ಮಾಡಿಕೊಳ್ಳಿ.
ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಟೊಮೆಟೊ ಪ್ಯೂರಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಕುದಿಸಿ.
ಟೊಮೆಟೊ ಪೇಸ್ಟ್ ದಪ್ಪವಾದ ಮೇಲೆ ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ ಕೈ ಆಡಿಸಿ.
ಹಲ್ವಾ ಬದಿಗಳಲ್ಲಿ ತುಪ್ಪ ಬಿಡಲು ಪ್ರಾರಂಭಿಸಿದಾಗ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ಸೇರಿಸಿದರೆ ರುಚಿಯಾದ ಟೊಮೆಟೊ ಹಲ್ವಾ ಸವಿಯಲು ಸಿದ್ಧ

