ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಬಲಿ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಪ್ರವಾಹಕ್ಕೆ ಸಿಲುಕಿ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ 11 ಜಿಲ್ಲೆಗಳಲ್ಲಿ ಬರೋಬ್ಬರಿ 7.21 ಲಕ್ಷಕ್ಕೂ ಹೆಚ್ಚು ಜನರು ಜಲಪ್ರಳಯದ ಭೀಕರತೆಗೆ ಸಿಲುಕಿ ನಲುಗಿಹೋಗಿದ್ದಾರೆ.ಕೇವಲ 24 ಗಂಟೆಗಳಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಹೆಚ್ಚುವರಿಯಾಗಿ 6 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಸಂಕಷ್ಟದಲ್ಲಿರುವ ಜನರಿಗಾಗಿ ಆಡಳಿತ ಮಂಡಳಿಯು 103 ಪರಿಹಾರ ಶಿಬಿರಗಳನ್ನು ತೆರೆದಿದ್ದು, ಸುಮಾರು 24,124 ಸಂತ್ರಸ್ತರು ಇಲ್ಲಿ ಆಶ್ರಯ ಪಡೆದಿದ್ದಾರೆ. ಇದರ ಜೊತೆಗೆ 255 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿ ಅಗತ್ಯ ನೆರವು ನೀಡಲಾಗುತ್ತಿದೆ.
ಮೇಲ್ಡಂಡೆಯ 3 ಜಿಲ್ಲೆಗಳಲ್ಲೇ ಶೇ. 94ರಷ್ಟು ಭೀಕರತೆ
ಅಸ್ಸಾಂನ ಮೇಲ್ಡಂಡೆ ಜಿಲ್ಲೆಗಳಾದ ಶಿವಸಾಗರ, ಚರಾಯ್ದೇವ್ ಮತ್ತು ಜೋರ್ಹಾಟ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ರಾಜ್ಯದ ಒಟ್ಟು ಪ್ರವಾಹ ಪೀಡಿತ ಪೈಕಿ ಸುಮಾರು ಶೇ. 94ರಷ್ಟು ಜನರು ಈ ಮೂರು ಜಿಲ್ಲೆಗಳಲ್ಲೇ ಇದ್ದಾರೆ
ಶಿವಸಾಗರ : ಇಡೀ ರಾಜ್ಯದಲ್ಲೇ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 3.75 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ. ಸುಮಾರು 300 ಹಳ್ಳಿಗಳು ನೀರಾವೃತಗೊಂಡಿದ್ದು, ನಿನ್ನೆ ಒಂದೇ ದಿನ ಈ ಜಿಲ್ಲೆಯಲ್ಲೇ ನಾಲ್ವರು ಸಾವು ಈಡಾಗಿದ್ದಾರೆ.
ಚರಾಯ್ದೇವ್ : 1.86 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತತ್ತರಿಸಿದ್ದಾರೆ.
ಜೋರ್ಹಾಟ್ : 1.15 ಲಕ್ಷಕ್ಕೂ ಹೆಚ್ಚು ಜನರು ಜಲಾವೃತ ಪ್ರದೇಶಗಳಲ್ಲಿ ಸಿಲುಕಿದ್ದಾರೆ.ಇವುಗಳ ಹೊರತಾಗಿ ಕಾಮರೂಪ್, ಕರ್ಬಿ ಆಂಗ್ಲಾಂಗ್, ಧೇಮಾಜಿ, ಹೋಜಾಯಿ ಹಾಗೂ ಕಾಮರೂಪ್ ಮೆಟ್ರೋ ಜಿಲ್ಲೆಗಳು ತೀವ್ರ ತೊಂದರೆಗೆ ಒಳಗಾಗಿವೆ.
ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದ ಮೇಘಸ್ಫೋಟವೇ ಪ್ರವಾಹಕ್ಕೆ ಮುಖ್ಯ ಕಾರಣ: ಸಿಎಂ ಹಿಮಂತ ಬಿಸ್ವ ಶರ್ಮಾ
ಪ್ರವಾಹ ಪರಿಸ್ಥಿತಿ ಗಂಭೀರಗೊಳ್ಳುತ್ತಿದ್ದಂತೆಯೇ ಜೋರ್ಹಾಟ್‌ನ ದೇರ್‌ಗಾಂವ್‌ನಲ್ಲಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಪ್ರವಾಹದ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ರಾಜ್ಯವಾದ ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದ ಹಠಾತ್ ಮೇಘಸ್ಫೋಟವೇ (Cloudburst) ಅಸ್ಸಾಂನ ನಾಲ್ಕು ಪ್ರಮುಖ ಜಿಲ್ಲೆಗಳು ಜಲಾವೃತಗೊಳ್ಳಲು ಕಾರಣ. ಪ್ರವಾಹದ ತೀವ್ರತೆ ಹೆಚ್ಚಿರುವುದರಿಂದ ಬಲಿ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ನೆರವು: ಅಮಿತ್ ಶಾ ಕರೆ, ಕೇಂದ್ರ ತಂಡ ಶೀಘ್ರ ಭೇಟಿ
ಅಸ್ಸಾಂನ ಭೀಕರ ಪ್ರವಾಹದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಹಿಮಂತ ಬಿಸ್ವ ಶರ್ಮಾ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಲು ಮತ್ತು ಪರಿಹಾರ ಕಾರ್ಯಗಳಿಗೆ ನೆರವಾಗಲು ಕೇಂದ್ರ ಸಚಿವಾಲಯಗಳ ಜಂಟಿ ತಂಡವನ್ನು ತಕ್ಷಣವೇ ಅಸ್ಸಾಂಗೆ ಕಳುಹಿಸಿಕೊಡಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ನೆರವಿಗೆ ಸಂಪೂರ್ಣವಾಗಿ ಸಜ್ಜಾಗಿವೆ ಎಂದು ಸಿಎಂ ತಿಳಿಸಿದ್ದಾರೆ.

