ಸಂಜೆ ಚಹಾದ ಜೊತೆಗೆ ಬಿಸಿಬಿಸಿಯಾದ ಕಚೋರಿ ತಿನ್ನುವ ಮಜಾವೇ ಬೇರೆ. ಆದರೆ ತೂಕ ಇಳಿಸುವ ಕಾಳಜಿ ಇರುವವರು ಹಾಗೂ ಎಣ್ಣೆ ಪದಾರ್ಥಗಳಿಂದ ದೂರವಿರಲು ಬಯಸುವವರು ಇಂತಹ ತಿಂಡಿಗಳಿಂದ ದೂರ ಉಳಿಯುತ್ತಾರೆ. ಆದರೆ ಈಗ ಎಣ್ಣೆಯಲ್ಲಿ ಕರಿಯದೆಯೇ ಅಷ್ಟೇ ರುಚಿಕರವಾದ ಮತ್ತು ಗರಿಗರಿಯಾದ ಕಚೋರಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಆಧುನಿಕ ಅಡುಗೆ ಮನೆಯಲ್ಲಿ ಬಳಕೆಯಾಗುವ ಏರ್ ಫ್ರೈಯರ್ ಸಹಾಯದಿಂದ ಆರೋಗ್ಯಕರವಾಗಿ ಮಟಾರ್ ಕಚೋರಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಹಿಟ್ಟು ತಯಾರಿಸಲು:
-
ಮೈದಾ ಹಿಟ್ಟು – 300 ಗ್ರಾಂ
-
ಎಣ್ಣೆ – 2 ಚಮಚ
-
ವಿನೆಗರ್ – 1 ಚಮಚ
-
ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು
ಸ್ಟಫಿಂಗ್ ತಯಾರಿಸಲು:
-
ಹಸಿ ಬಟಾಣಿ – 1 ಕಪ್
-
ಕಡಲೆ ಹಿಟ್ಟು (ಬೇಸನ್) – 1 ಚಮಚ
-
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ ಕಪ್
-
ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ – ತಲಾ 1 ಚಮಚ
-
ಅಚ್ಚಖಾರದ ಪುಡಿ – 1 ಚಮಚ
-
ಅರಿಶಿನ ಪುಡಿ ಮತ್ತು ಆಮ್‌ಚೂರ್ ಪುಡಿ – ತಲಾ ಅರ್ಧ ಚಮಚ
-
ಎಣ್ಣೆ – 2 ಚಮಚ
-
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು, ಎಣ್ಣೆ ಮತ್ತು ವಿನೆಗರ್ ಹಾಕಿ ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಮೃದುವಾಗಿ ಹಿಟ್ಟನ್ನು ಕಲಸಿಕೊಳ್ಳಿ. ಈ ಹಿಟ್ಟಿಗೆ ಸ್ವಲ್ಪ ಎಣ್ಣೆ ಸವರಿ, ಒದ್ದೆಯಾದ ಬಟ್ಟೆಯನ್ನು ಮುಚ್ಚಿ ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ.
ಈ ನಡುವೆ ಕಚೋರಿಯ ಒಳಗಿನ ಮಸಾಲೆ ಸಿದ್ಧಪಡಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ಗರಂ ಮಸಾಲಾ, ಆಮ್‌ಚೂರ್ ಮತ್ತು ಅರಿಶಿನ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಕೈಯಾಡಿಸಿ. ಈಗ ಕಡಲೆ ಹಿಟ್ಟು ಹಾಗೂ ಹಸಿ ಬಟಾಣಿ ಮತ್ತು ಉಪ್ಪು ಸೇರಿಸಿ ಒಂದು ನಿಮಿಷ ಬೇಯಿಸಿ. ಉರಿಯಿಂದ ಕೆಳಗಿಳಿಸಿದ ನಂತರ ಚಮಚದ ಹಿಂಭಾಗದಿಂದ ಬಟಾಣಿ ಮಿಶ್ರಣವನ್ನು ಚೆನ್ನಾಗಿ ಮ್ಯಾಶ್ ಮಾಡಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
ಈಗ ಕಲಸಿಟ್ಟ ಮೈದಾ ಹಿಟ್ಟನ್ನು ಸಮಾನ ಭಾಗಗಳಾಗಿ ಹಂಚಿಕೊಂಡು ಸಣ್ಣ ಪೂರಿಯಂತೆ ಲಟ್ಟಿಸಿಕೊಳ್ಳಿ. ಇದರ ಮಧ್ಯದಲ್ಲಿ ಸಿದ್ಧಪಡಿಸಿದ ಬಟಾಣಿ ಮಸಾಲೆಯನ್ನು ಇಟ್ಟು, ಅಂಚುಗಳನ್ನು ಮುಚ್ಚಿ ಕಚೋರಿ ಆಕಾರಕ್ಕೆ ತಂದುಕೊಳ್ಳಿ.
ಕೊನೆಯದಾಗಿ ಏರ್ ಫ್ರೈಯರ್ ಅನ್ನು 360 ಡಿಗ್ರಿಗೆ 5 ನಿಮಿಷಗಳ ಕಾಲ ಪ್ರಿ-ಹೀಟ್ ಮಾಡಿ. ನಂತರ ಏರ್ ಫ್ರೈಯರ್ ಬಾಸ್ಕೆಟ್‌ಗೆ ಸ್ವಲ್ಪ ತುಪ್ಪ ಸವರಿ, ಸಿದ್ಧಪಡಿಸಿದ ಕಚೋರಿಗಳನ್ನು ಅದರಲ್ಲಿ ಇಟ್ಟು, ಮೇಲ್ಭಾಗಕ್ಕೂ ಸ್ವಲ್ಪ ತುಪ್ಪವನ್ನು ಬ್ರಶ್ ಮಾಡಿ ಬೇಯಿಸಿದರೆ ಎಣ್ಣೆಯಿಲ್ಲದ ಗರಿಗರಿಯಾದ ಮಟಾರ್ ಕಚೋರಿ ಸವಿಯಲು ಸಿದ್ಧ. ಇದನ್ನು ಆಲೂಗಡ್ಡೆ ಪಲ್ಯ ಅಥವಾ ಚಟ್ನಿ ಜೊತೆ ಸವಿಯಬಹುದು.

