ನವದೆಹಲಿ: ತೇಜಸ್ವಿನ್ ಶಂಕರ್ ಸೇರಿದಂತೆ ಒಟ್ಟು 17 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ 2025 ನೀಡಲಾಗುವುದು ಎಂದು ಕ್ರೀಡಾ ಸಚಿವಾಲಯ ಮಂಗಳವಾರ (ಆಗಸ್ಟ್ 18) ಘೋಷಿಸಿದೆ. ಆದರೆ ಈ ಬಾರಿ ಖೇಲ್ ರತ್ನ ಪ್ರಶಸ್ತಿಗೆ ಯಾರ ಹೆಸರನ್ನೂ ಆಯ್ಕೆ ಮಾಡಲಾಗಿಲ್ಲ.
ವಿಶ್ವಕಪ್ ಗೆದ್ದ ಚೆಸ್ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಗಾಯತ್ರಿ ಗೋಪಿಚಂದ್ ಕೂಡ ಅರ್ಜುನ ಪ್ರಶಸ್ತಿ ಪಡೆಯಲಿರುವ ಕ್ರೀಡಾಪಟುಗಳ ಪಟ್ಟಿಯಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ, ಗಾಯತ್ರಿ ಗೋಪಿಚಂದ್ ಅವರ ಮಹಿಳಾ ಡಬಲ್ಸ್ ಜೋಡಿಯಾಗಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಟ್ರೀಸಾ ಜಾಲಿ, ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಬಾಕ್ಸರ್ ನರೇಂದರ್ ಹಾಗೂ ಭರವಸೆಯ ಕಿವುಡ ಶೂಟರ್ ಧನುಷ್ ಶ್ರೀಕಾಂತ್ ಅವರೂ ಸೇರಿದ್ದಾರೆ.
1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ಫುಟ್ಬಾಲ್ ತಂಡದ ಸದಸ್ಯರಾಗಿದ್ದ ಮಾಜಿ ಫುಟ್ಬಾಲ್ ಆಟಗಾರ ಐ. ಅರುಮೈನಾಯಗಂ ಅವರಿಗೆ ‘ಜೀವಮಾನ ಸಾಧನೆ’ ವಿಭಾಗದಲ್ಲಿ ಅರ್ಜುನ ಪ್ರಶಸ್ತಿ ನೀಡಲಾಗುತ್ತಿದೆ.
“ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ವಿವಿಧ ವಿಭಾಗಗಳಲ್ಲಿ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ” ಎಂದು ಕ್ರೀಡಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ತೇಜಸ್ವಿನ್ ಶಂಕರ್ ಐತಿಹಾಸಿಕ ಸಾಧನೆ
ತೇಜಸ್ವಿನ್ ಶಂಕರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನ ಡೆಕಾಥ್ಲಾನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇನ್ನು ದಿವ್ಯಾ ದೇಶ್‌ಮುಖ್ ಅವರು ಜಾರ್ಜಿಯಾದ ಬಟುಮಿಯಲ್ಲಿ ನಡೆದ FIDE ಮಹಿಳಾ ವಿಶ್ವಕಪ್ 2025ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಅರ್ಜುನ ಪ್ರಶಸ್ತಿ ಘೋಷಣೆ ವಿಳಂಬವಾಗಿದ್ದೇಕೆ?
ದೇಶದ ಪ್ರಮುಖ ವಾರ್ಷಿಕ ಕ್ರೀಡಾ ಗೌರವಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಘೋಷಣೆ ಈ ಬಾರಿ ವಿಳಂಬವಾಗಿತ್ತು. ಆಯ್ಕೆ ಸಮಿತಿಯು ಸುಮಾರು ಆರು ತಿಂಗಳ ಹಿಂದೆಯೇ ಶಿಫಾರಸುಗಳನ್ನು ಸಲ್ಲಿಸಿದ್ದರೂ, ಪ್ರಶಸ್ತಿಗಳ ಅಂತಿಮ ಘೋಷಣೆ ವಿಳಂಬವಾಗಿತ್ತು.
ಅರ್ಜುನ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಮತ್ತೊಮ್ಮೆ ಪರಿಶೀಲಿಸುತ್ತಿರುವುದೇ ವಿಳಂಬಕ್ಕೆ ಕಾರಣ ಎಂದು ಕ್ರೀಡಾ ಸಚಿವಾಲಯ ತಿಳಿಸಿತ್ತು. ಪ್ರಶಸ್ತಿಗಳ ವಿಶ್ವಾಸಾರ್ಹತೆಯನ್ನು ಕಾಪಾಡಲು ಹೆಚ್ಚುವರಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವಾಲಯದ ಮೂಲಗಳು ಹೇಳಿದ್ದವು.
ಈ ವಿಳಂಬದಿಂದ ಪ್ರಶಸ್ತಿಗಾಗಿ ಕಾಯುತ್ತಿದ್ದ ಕ್ರೀಡಾಪಟುಗಳಲ್ಲಿ ಅಸಮಾಧಾನವೂ ವ್ಯಕ್ತವಾಗಿತ್ತು. ಒಲಿಂಪಿಕ್ಸ್ ಪದಕ ವಿಜೇತ ಹಾಗೂ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರೊಬ್ಬರು, “ಇಷ್ಟು ದಿನವಾದರೂ ಘೋಷಣೆ ಮಾಡದಿರುವುದು ಬೇಸರದ ಸಂಗತಿ. ಕ್ರೀಡಾಪಟುಗಳಿಗೆ ಇದು ನಿರುತ್ಸಾಹ ಉಂಟುಮಾಡುತ್ತದೆ” ಎಂದು PTIಗೆ ತಿಳಿಸಿದ್ದರು.
ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗುತ್ತದೆ. ಹಲವು ದಶಕಗಳ ಕಾಲ ಆಗಸ್ಟ್ 29, ರಾಷ್ಟ್ರೀಯ ಕ್ರೀಡಾ ದಿನ ಹಾಗೂ ಭಾರತೀಯ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಸಮಾರಂಭ ನಡೆಯುತ್ತಿತ್ತು.
ಆದರೆ 2020ರಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆನ್‌ಲೈನ್ ಮೂಲಕ ನಡೆಸಲಾಯಿತು. ಬಳಿಕ ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿ ಪ್ರದಾನದ ದಿನಾಂಕವನ್ನು ನಿಗದಿಪಡಿಸಲಾಗುತ್ತಿದೆ.2025ರಲ್ಲೂ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭವು ವಿಳಂಬವಾಗಿ ಜನವರಿ 17ರಂದು ನಡೆದಿತ್ತು.
ಅರ್ಜುನ ಪ್ರಶಸ್ತಿ 2025
-
ತೇಜಸ್ವಿನ್ ಶಂಕರ್ – ಅಥ್ಲೆಟಿಕ್ಸ್
-
ಮೊಹಮ್ಮದ್ ಅಜ್ಮಲ್ ವಿ. – ಅಥ್ಲೆಟಿಕ್ಸ್
-
ಪ್ರಿಯಾಂಕಾ ಗೋಸ್ವಾಮಿ – ಅಥ್ಲೆಟಿಕ್ಸ್
-
ಟ್ರೀಸಾ ಜಾಲಿ – ಬ್ಯಾಡ್ಮಿಂಟನ್
-
ಪುಲ್ಲೇಲಾ ಗಾಯತ್ರಿ ಗೋಪಿಚಂದ್ – ಬ್ಯಾಡ್ಮಿಂಟನ್
-
ನರೇಂದರ್ – ಬಾಕ್ಸಿಂಗ್
-
ವಿದಿತ್ ಸಂತೋಷ್ ಗುಜರಾತಿ – ಚೆಸ್
-
ದಿವ್ಯಾ ಜಿತೇಂದ್ರ ದೇಶ್‌ಮುಖ್ – ಚೆಸ್
-
ಧನುಷ್ ಶ್ರೀಕಾಂತ್ – ಕಿವುಡರ ಶೂಟಿಂಗ್
-
ಲಾಲ್ರೆಮ್ಸಿಯಾಮಿ – ಹಾಕಿ
-
ರಾಜ್‌ಕುಮಾರ್ ಪಾಲ್ – ಹಾಕಿ
-
ಸುರಜೀತ್ – ಕಬಡ್ಡಿ
-
ಪೂಜಾ – ಕಬಡ್ಡಿ
-
ರುದ್ರಾಂಶ್ ಖಂಡೇಲ್‌ವಾಲ್ – ಪ್ಯಾರಾ ಶೂಟಿಂಗ್
-
ಏಕ್ತಾ ಭ್ಯಾನ್ – ಪ್ಯಾರಾ ಅಥ್ಲೆಟಿಕ್ಸ್
-
ಅರವಿಂದ್ ಸಿಂಗ್ – ರೋಯಿಂಗ್
-
ಅಖಿಲ್ ಶಿಯೋರನ್ – ಶೂಟಿಂಗ್
ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ) 2025
-
ಐ. ಅರುಮೈನಾಯಗಂ – ಫುಟ್ಬಾಲ್
ದ್ರೋಣಾಚಾರ್ಯ ಪ್ರಶಸ್ತಿ 2025 — ಸಾಮಾನ್ಯ ವಿಭಾಗ
-
ಪರ್ವೀರ್ ಸಿಂಗ್ – ಅಥ್ಲೆಟಿಕ್ಸ್
-
ಛೋಟೆ ಲಾಲ್ ಯಾದವ್ – ಬಾಕ್ಸಿಂಗ್
-
ನೇಹಾ ನಂದಕುಮಾರ್ ಚವಾಣ್ – ಶೂಟಿಂಗ್
ದ್ರೋಣಾಚಾರ್ಯ ಪ್ರಶಸ್ತಿ 2025 — ಜೀವಮಾನ ಸಾಧನೆ ವಿಭಾಗ
-
ಧರ್ಮೇಂದ್ರ ಸಿಂಗ್ ಯಾದವ್ – ಬಾಕ್ಸಿಂಗ್
-
ವೀರೇಂದ್ರ ಕುಮಾರ್ – ಕುಸ್ತಿ
ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹನ ಪುರಸ್ಕಾರ 2025
-
ಆರ್ಮಿ ಪ್ಯಾರಾಲಿಂಪಿಕ್ ನೋಡ್, ಪುಣೆ – ಕ್ರೀಡಾ ಪ್ರೋತ್ಸಾಹ ಮತ್ತು ಅಭಿವೃದ್ಧಿ

