HomeKarnatakaಉದ್ಯೋಗ ಮಾಹಿತಿಗಾಗಿ ಉದ್ಯೋಗ ಸೇತು ಯೋಜನೆ ಆರಂಭ: ಸಿಎಂ ಡಿ.ಕೆ.ಶಿವಕುಮಾರ್

ಉದ್ಯೋಗ ಮಾಹಿತಿಗಾಗಿ ಉದ್ಯೋಗ ಸೇತು ಯೋಜನೆ ಆರಂಭ: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಕೌಶಲ್ಯ ಎಂದರೆ ಜ್ಞಾನಿಗಳ, ಸಾಧಕರ ಸಂಗಮ. ಕೌಶಲ್ಯವನ್ನು ಯಾರೂ ಕದಿಯಲು ಆಗುವುದಿಲ್ಲ. ಇಲ್ಲಿನ ಯುವಕರ ಕೌಶಲ್ಯದಿಂದ ಕರ್ನಾಟಕ ವಿಶ್ವದಲ್ಲೇ ಹೊಸ ಸಂಶೋಧನೆಯ ತವರೂರಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್,ದೇಶದಲ್ಲಿ ಪ್ರಜ್ಞಾವಂತರು ಹೆಚ್ಚಾಗಬೇಕು ಎಂದರೆ ವಿದ್ಯೆಯ ಜೊತೆಗೆ ಕೌಶಲ್ಯ ಇರಬೇಕು. ಕೌಶಲ್ಯ ಇದ್ದರೆ ರಾಜಯೋಗ ಇದ್ದಂತೆ. ಇದನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ಎಂಜಿನಿಯರ್ ಗಳಿದ್ದರೆ, ನಮ್ಮ  ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಕರ್ನಾಟಕ ಕೌಶಲ್ಯದ ತವರು ಎಂದರು. 

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೃಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಕೌಶಲ್ಯ ವಿದ್ಯೆ. ಪ್ರತಿಯೊಬ್ಬರಲ್ಲೂ ಕೌಶಲ್ಯ ಇರುತ್ತದೆ. ಅಕ್ಕಸಾಲಿಗ, ಮರಗೆಲಸ ಸೇರಿದಂತೆ ಅನೇಕ ಕೌಶಲ್ಯಯುತ ಕೆಲಸಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಯಾವ ತಂತ್ರಜ್ಞಾನ ಇಲ್ಲದೇ ಇದ್ದ ಹೊತ್ತಿನಲ್ಲೂ ಖೈದಿಗಳನ್ನು ಬಳಸಿ ವಿಧಾನಸೌಧ ಕಟ್ಟಲಾಯಿತು. ಅವರಲ್ಲೂ ಕೌಶಲ್ಯ ಇತ್ತು. ಪ್ರತಿಯೊಬ್ಬರ ಮನುಷ್ಯನಲ್ಲೂ ಕೌಶಲ್ಯ ಇದ್ದೇ ಇರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು. 

ಇಂದು ಟಾಟಾ, ಮಹೀಂದ್ರಾದಂಥ ದೊಡ್ಡ ಕೈಗಾರಿಕೆ ನಡೆಸುತ್ತಿರುವ ಉದ್ಯಮಿಗಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಇಲ್ಲಿ ಕೌಶಲ್ಯ ಪಡೆದು ವಿಶ್ವದಾದ್ಯಂತ ತಮ್ಮ ಕೈಗಾರಿಕಾ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಹೀಗೆ ನಮ್ಮ ನಮ್ಮಲ್ಲಿ ಸ್ಪರ್ಧೆ ನಡೆಸುವುದಲ್ಲ. ನೀವು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನಡೆಸಬೇಕು ಎಂದು ಹೇಳಿದರು. 

  

ಸ್ವಾಮಿ ವಿವೇಕಾನಂದರು ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಜಿಮ್ ಷೆಡ್ ಜೀ ಟಾಟಾ ಅವರೊಂದಿಗೆ ದೇಶದ ಬಡತನದ ಬಗ್ಗೆ ಚರ್ಚೆ ನಡೆಸಿದರು. ವಿಜ್ಞಾನದಿಂದ ಮಾತ್ರ ಬಡತನ ನೀಗಲಿದೆ ಎಂದು ತೀರ್ಮಾನಿಸಿ, ಮೈಸೂರಿನ ಅಂದಿನ ಮಹಾರಾಜರ ಬಳಿ ವಿವೇಕಾನಂದರು ನಿವೇದಿಸಿದ್ದರಿಂದ 360 ಎಕರೆ ಪ್ರದೇಶದಲ್ಲಿ ಐಐಎಸ್ ಸಿ ಸ್ಥಾಪನೆಯಾಯಿತು. ಈ ಸಂಸ್ಥೆ ಇಂದು ಲಕ್ಷಾಂತರ ಪ್ರತಿಭಾವನ್ವಿತ ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಸ್ಮರಿಸಿದರು.  

ಕೌಶಲ್ಯವನ್ನು ಯಾರೂ ಕೂಡ ಕದಿಯಲು ಆಗುವುದಿಲ್ಲ. ನನ್ನ ಈ ಅಧಿಕಾರ ಯಾವತ್ತೋ ಒಂದು ದಿನ ಕೊನೆಯಾಗಬಹುದು. ಆದರೆ ನನ್ನಲ್ಲಿ ಇರುವ ಕೌಶಲ್ಯ ಕೊನೆಯಾಗಲ್ಲ. ಜೊತೆಗೆ ನಾವು ಪಡೆದ ವಿದ್ಯೆಯೂ ಸಹ ಎಂದಿಗೂ ಕುಂದು ಹೋಗುವುದಿಲ್ಲ ಎಂದರು. 

ಪದವಿಗೂ ಕೌಶಲ್ಯಕ್ಕೂ ಸಂಬಂಧ ಇಲ್ಲ. ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಎಷ್ಟು ಪದವಿ ಇದ್ದು ಫಲವೇನು? ಹೊಲ ಉಳುವಾಗ ರೈತ ಎಷ್ಟು ಅಚ್ಚುಕಟ್ಟಾಗಿ ನೇರವಾಗಿ ಹೊಲ ಉಳುತ್ತಾನೆ. ಹೆಣ್ಣು ಮಕ್ಕಳು ಅಳತೆಗೆ ತಕ್ಕಂತೆ ಪೈರು ನಾಟಿ ಮಾಡುತ್ತಾರೆ. ಇವರಿಗೆ ಯಾವ ಎಂಜಿನಿಯರ್ ಕೂಡ ಸ್ಕೇಲ್ ಇಟ್ಟು ಪಾಠ ಮಾಡಿಲ್ಲ. ಕೈಯಲ್ಲಿ ಕೌಶಲ್ಯ ಇದ್ದರೆ ಬದುಕು. ಕೌಶಲ್ಯ ಇದ್ದರೆ ಎಲ್ಲಿ ಬೇಕಾದರೂ ಬದುಕಬಹುದು ಎಂದರು. 

ನವೆಂಬರ್ ನಲ್ಲಿ ನಡೆಯುವ ಬೆಂಗಳೂರು ಟೆಕ್ ಸಮಿಟ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಭಾಗವಹಿಸಬೇಕು. ನಮ್ಮ ಸರ್ಕಾರ ಯುವ ಜನತೆಯ ಭವಿಷ್ಯವನ್ನು ಗುರಿ ಇಟ್ಟುಕೊಂಡು ಎಐ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಿದೆ ಎಂದರು.

ಉದ್ಯೋಗ ಸೇತು ಯೋಜನೆ ಆರಂಭ

ಖಾಸಗಿ ವಲಯದಲ್ಲಿ ಉದ್ಯೋಗ ಮಾಹಿತಿ ನೀಡಲು ಯುವಸೇತು ಎನ್ನುವ ಹೊಸ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದ್ದೇವೆ. ಖಾಸಗಿ ಕ್ಷೇತ್ರದ ಉದ್ಯೋಗದಾತರು  ಈ ಮೂಲಕ ತಮ್ಮಲ್ಲಿರುವ ಉದ್ಯೋಗ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ವಿವರಿಸಿದರು. 

ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ನೆರೆದಿದ್ದ ವಿದ್ಯಾರ್ಥಿಗಳು ಚಪ್ಪಾಳೆ ಜೊತೆಗೆ ಶಿಳ್ಳೆ ಹೊಡೆದರು. ಆಗ ಸಿಎಂ, ಚಪ್ಪಾಳೆ ಹೊಡೀರಿ. ಶಿಳ್ಳೆ ಹೊಡೆಯಬೇಡಿ. ಟೆಂಟ್ ನಲ್ಲಿ ರಾಜ್ ಕುಮಾರ್ ಸಿನಿಮಾ ನೋಡುವಾಗ ನಾನು ಶಿಳ್ಳೆ ಹೊಡೆಯುತ್ತಿದ್ದೆ. ಶಿಳ್ಳೆ ಇಲ್ಲೆಲ್ಲ ಹೊಡೆಯಬಾರದು. ಪಕ್ಷಿಗಳು ಶಿಳ್ಳೆ ಹೊಡೆದರೆ ಚೆನ್ನಾಗಿ ಕೇಳುತ್ತೆ. ಅವು ಮತ್ತೊಂದು ಪಕ್ಷಿಯನ್ನು ಕರೆಯುವುದಕ್ಕೆ ಶಿಳ್ಳೆ ಹೊಡೆಯುತ್ತದೆ. ನೀವು ಆ ಕೆಲಸ ಮಾಡಬೇಡಿ. ಶಿಸ್ತನ್ನು ಪಾಲಿಸಿ ಎಂದು ಕಿವಿಮಾತು ಹೇಳಿದರು. 

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular