ಬೆಂಗಳೂರು: ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಸೇರಿದಂತೆ ಒಟ್ಟು 3862 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿಗಳ ಸ್ಥಾಪನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮೋದನೆ ನೀಡಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಶುಭಮಂಗಳಾ ಈ ಕುರಿತಾಗಿ ಆದೇಶ ಹೊರಡಿಸಿದ್ದಾರೆ. ಐಸಿಟಿ ಮತ್ತು ಡಿಜಿಟಲ್ ಉಪಕ್ರಮಗಳ ಅಡಿ 91.54 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿಗಳ ಸ್ಥಾಪನೆಗೆ ಅಗತ್ಯವಿರುವ ಪರಿಕರ ಖರೀದಿಸಲು ಸೂಚಿಸಿದ್ದಾರೆ.
ಕೆಟಿಪಿಪಿ ಕಾಯ್ದೆಯ ಅನುಸಾರ ಪಾರದರ್ಶಕವಾಗಿ ರಾಜ್ಯಮಟ್ಟದಲ್ಲಿ ಕೇಂದ್ರೀಕೃತ ಟೆಂಡರ್ ಮೂಲಕ ಉಪಕರಣಗಳ ಖರೀದಿಸಬೇಕು. ಪರಿಕರಗಳನ್ನು ಪೂರೈಕೆ ಮಾಡಲು ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಲಾಗಿದೆ.
ಕೆಲವು ಷರತ್ತುಗಳನ್ನು ವಿಧಿಸಿ ಸ್ಮಾರ್ಟ್ ಕ್ಲಾಸ್ ಕೊಠಡಿಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. 2025 ಸೆಪ್ಟೆಂಬರ್ ಮತ್ತು 2026ರ ಜನವರಿ 6ರ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಉಪಕರಣಗಳನ್ನು ಖರೀದಿಸಬೇಕು. ಈಗ ಒದಗಿಸಿದ ಅನುದಾನ ಬಳಕೆ ಮಾಡಿಕೊಂಡು ಹೆಚ್ಚುವರಿ ಅನುದಾನ ಕೋರದಂತೆ ಪರಿಕರ ಪೂರೈಕೆ ಮಾಡಬೇಕು. ಯೋಜನೆ ಅನುಷ್ಠಾನಕ್ಕೆ ಅನುಮೋದನೆಗೊಂಡ ಶಾಲೆಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಅಗತ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

