ತುಮಕೂರು : ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಬಳಿ ನಡೆದಿದೆ. ತುಮಕೂರು ತಾಲೂಕಿನ ನೆಲಹಾಳ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಅಪಘಾತ ಸಂಭವಿಸಿದೆ.
ಲಾರಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದರೆ, ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮೃತರೆಲ್ಲರೂ ಬೆಂಗಳೂರು ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಗೋಕರ್ಣ, ಮುರುಡೇಶ್ವರ, ಉಡುಪಿಗೆ ಪ್ರವಾಸಕ್ಕೆ ತೆರಳಿ ಪ್ರವಾಸ ಮುಗಿಸಿ ನಂತರ ಇಂದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾಗ ದುರ್ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

