ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ಬಹುನಿರೀಕ್ಷಿತ ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಹೊಸ ಇತಿಹಾಸ ಬರೆದಿದೆ. ಚೆನ್ನೈನ ಕೆಂಬರಂಬಾಕಂನಲ್ಲಿರುವ ವೇಲ್ಸ್ ಥಿಯೇಟರ್ ಆವರಣದಲ್ಲಿ ನಟಿ ನಯನತಾರಾ ಅವರ ಬೃಹತ್ 60 ಅಡಿ ಎತ್ತರದ ಕಟೌಟ್ ನಿರ್ಮಿಸಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ನಟಿಯೊಬ್ಬರಿಗೆ ನಿರ್ಮಿಸಲಾದ ಅತ್ಯಂತ ಎತ್ತರದ ಕಟೌಟ್ ಇದಾಗಿದ್ದು, ಸದ್ಯ ಪ್ರೇಕ್ಷಕರ ಮತ್ತು ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಸುಂದರ್ ಸಿ ನಿರ್ದೇಶನದ ಈ ಚಿತ್ರವು ನವೆಂಬರ್ ಆರರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಅದೇ ಸಮಯದಲ್ಲಿ ಸೂರ್ಯ ಅಭಿನಯದ ‘ಸೀನ್’ ಮತ್ತು ಬಹುಕೋಟಿ ಬಜೆಟ್‌ನ ‘ರಾಮಾಯಣ’ ಚಿತ್ರಗಳು ಕೂಡ ಬಿಡುಗಡೆಯಾಗುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ತೆಲುಗಿನಲ್ಲಿ ‘ಮಹಾಸಕ್ತಿ’ ಹೆಸರಿನಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.
ವೇಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಮತ್ತು ರೌಡಿ ಪಿಕ್ಚರ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಈ Sequel ಚಿತ್ರದಲ್ಲಿ ರೆಜಿನಾ ಕೆಸಂಡ್ರಾ, ದುನಿಯಾ ವಿಜಯ್, ಅಜಯ್ ಘೋಷ್, ಉರ್ವಶಿ, ಅಭಿನಯ ಹಾಗೂ ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಬಿಡುಗಡೆ ದಿನ ಹತ್ತಿರವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಚಾರದ ಕಾವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

