ಬಾಲಿವುಡ್‌ನ ಹಿರಿಯ ನಟ ಅನ್ನು ಕಪೂರ್ ತಮ್ಮ ನೇರ ನುಡಿ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವವರು. ಕಳೆದ ವರ್ಷ ನಟಿ ತಮನ್ನಾ ಭಾಟಿಯಾ ಅವರ ದೇಹದ ಬಣ್ಣದ ಕುರಿತು ‘ದುಧಿಯಾ ಬದನ್’ (ಹಾಲಿನಂತಹ ಮೈಬಣ್ಣ) ಎಂದು ಹೇಳುವ ಮೂಲಕ ಅವರು ದೊಡ್ಡ ಮಟ್ಟದ ಟೀಕೆಗೆ ಗುರಿಯಾಗಿದ್ದರು. ಇದೀಗ ಈ ವಿವಾದದ ಬಗ್ಗೆ ಮೌನ ಮುರಿದಿರುವ ಅವರು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಲೇ ವಿರೋಧಿಸಿದವರಿಗೆ ತಿರುಗೇಟು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅನ್ನು ಕಪೂರ್, “ನಾನು ಅದೇ ಮಾತನ್ನು ಇಂಗ್ಲಿಷ್‌ನಲ್ಲಿ ‘ಮಿಲ್ಕಿ ಬಾಡಿ’ ಎಂದು ಹೇಳಿದ್ದರೆ ಯಾರೂ ವಿರೋಧಿಸುತ್ತಿರಲಿಲ್ಲ. ಆದರೆ ಹಿಂದಿಯಲ್ಲಿ ಹೇಳಿದ್ದಕ್ಕೇ ಜನರಿಗೆ ಕೆಟ್ಟದಾಗಿ ಕೇಳಿಸಿದೆ. ಭಾಷೆಯ ಕಾರಣಕ್ಕೆ ವಿಷಯವನ್ನು ದೊಡ್ಡದು ಮಾಡಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ತ್ರೀ 2’ ಸಿನಿಮಾದ ‘ಆಜ್ ಕಿ ರಾತ್’ ಹಾಡಿನಲ್ಲಿ ತಮನ್ನಾ ನೃತ್ಯ ಮತ್ತು ಅವರ ಸೌಂದರ್ಯವನ್ನು ಮೆಚ್ಚಿ ನಾನು ಆ ಮಾತು ಹೇಳಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಯಾರನ್ನಾದರೂ ನೋಡಿ ಹೊಗಳುವುದು ಕಾಮವಲ್ಲ, ಅದು ಮೆಚ್ಚುಗೆ ಮಾತ್ರ. ರಸ್ತೆಯಲ್ಲಿ ಹೋಗುವ ಐಷಾರಾಮಿ ಕಾರನ್ನು ನೋಡಿ ಮೆಚ್ಚಿಕೊಂಡರೆ ಅದನ್ನು ಕದಿಯಬೇಕು ಎಂಬ ಅರ್ಥವಲ್ಲ. ತಮನ್ನಾ ಅವರಿಗೆ ನನ್ನ ಮಕ್ಕಳ ವಯಸ್ಸಿದೆ. ನನ್ನ ಮಾತಿನಿಂದ ಅವರಿಗೆ ಬೇಸರವಾಗಿದ್ದರೆ, ಅವರ ಕಾಲು ಮುಟ್ಟಿ ಕ್ಷಮೆಯಾಚಿಸಲು ನಾನು ಸಿದ್ಧ. 71 ವರ್ಷದ ವ್ಯಕ್ತಿ ಕಾಲು ಮುಟ್ಟಿ ಕ್ಷಮೆ ಕೇಳಿದರೆ ಅವರು ಏನನ್ನಾರು ಹೇಳಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.
ಸದ್ಯ ಅನ್ನು ಕಪೂರ್ ಅವರ ಈ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಅನ್ನು ಕಪೂರ್ ಅವರ ಈ ಧೋರಣೆಯನ್ನು ಕೆಲವರು ಸಮರ್ಥಿಸಿದರೆ, ಇನ್ನೂ ಕೆಲವರು ಹಿರಿಯ ನಟನ ಸಾರ್ವಜನಿಕ ನಡವಳಿಕೆಯನ್ನು ಟೀಕಿಸುತ್ತಿದ್ದಾರೆ.

