ಮೈಸೂರು: ಸರ್ಕಾರದ ಸುತ್ತೋಲೆ ಹಾಗೂ ನಿರ್ದೇಶನಗಳನ್ನು ಉಲ್ಲಂಘಿಸಿ ನಿವೇಶನಗಳ ಅಕ್ರಮ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಮೈಸೂರು ಪಶ್ಚಿಮ ಉಪ ನೋಂದಣಿ ಕಚೇರಿಯ ಉಪ ನೋಂದಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಕೋರ್ಟ್ ಡಿಕ್ರಿ ಅಥವಾ ಆದೇಶದ ಸಬ್ ಆರ್ಟಿಕಲ್ ದುರ್ಬಳಕೆ ಮಾಡಿಕೊಂಡು 24 ನಿವೇಶನಗಳ ದಾಖಲೆಗಳನ್ನು ನೋಂದಾಯಿಸಿದ ಆರೋಪದಡಿ ಸಬ್ ರಿಜಿಸ್ಟ್ರರ್ ನ್ನು ಅಮಾನತು ಮಾಡಲಾಗಿದೆ.
ಎನ್.ಶ್ರೀಕಾಂತ್ ಅಮಾನತುಗೊಂಡ ಸಬ್ ರಿಜಿಸ್ಟ್ರರ್. ಶಿಸ್ತು ಪ್ರಾಧಿಕಾರ ಹಾಗೂ ನೋಂದಣಿ ಮಹಾ ಪರಿವೀಕ್ಷಕರು ಈ ಆದೇಶ ಹೊರಡಿಸಿದ್ದಾರೆ. ಶ್ರೀಕಾಂತ್ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಮುಂದಿನ ಆದೇಶದವರೆಗೆ ಅಮಾನತಿನಲ್ಲಿಡಲಾಗಿದೆ.
ಕಳೆದ ಡಿಸೆಂಬರ್ನಲ್ಲಿ ತಮ್ಮ ನಿವೇಶನವನ್ನು ಅಕ್ರಮವಾಗಿ ಅನ್ಯರಿಗೆ ನೋಂದಣಿ ಮಾಡುತ್ತಿರುವುದಾಗಿ ಮಾಜಿ ಎಂಎಲ್ಸಿ ಸಿದ್ಧರಾಜು ಅವರು ಮೈಸೂರಿನ ಪಶ್ಚಿಮ ಉಪ ನೋಂದಣಿ ಕಚೇರಿಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇಲ್ಲಿನ ಉಪ ನೋಂದಣಾಧಿಕಾರಿ ಶ್ರೀಕಾಂತ್ ಹಾಗೂ ಅಲ್ಲಿನ ಸಿಬ್ಬಂದಿ ಶಾಮೀಲಾಗಿ ತಮಗೆ ಸೇರಿದ ಮೈಸೂರು ತಾಲೂಕು ಕೇರ್ಗಳ್ಳಿ ಗ್ರಾಮ ವ್ಯಾಪ್ತಿಯ 24 ನಿವೇಶನಗಳ ದಾಖಲೆಗಳನ್ನು ಅಕ್ರಮವಾಗಿ ಸಂಪಾದಿಸಿ, ತಿದ್ದುಪಡಿ ಮಾಡಿ ಕಾನೂನುಬಾಹಿರವಾಗಿ ಅನ್ಯರ ಹೆಸರಿನಲ್ಲಿ ನೋಂದಣಿ ಮಾಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ನೋಂದಣಿಗಾಗಿ ದಿನಾಂಕ ಪಡೆಯಲು ದಾಖಲೆಗಳನ್ನು ಅಪ್ಲೋಡ್ ಮಾಡಿ, ನಿವೇಶನಗಳ ಮಾಲೀಕರ ಅರಿವಿಗೆ ಬಾರದ ರೀತಿಯಲ್ಲಿ ನೋಂದಣಿ ಪ್ರಕ್ರಿಯೆ ನಡೆಸಿರುವ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಈ ಸಂಬಂಧ ಸಿದ್ಧರಾಜು ಅವರು ಸರ್ಕಾರಕ್ಕೂ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು.
ತನಿಖೆ ವೇಳೆ ಶ್ರೀಕಾಂತ್ ಅವರು 24 ದಾಖಲೆಗಳನ್ನು ಕೋರ್ಟ್ ಡಿಕ್ರಿ/ಆದೇಶದ ಸಬ್ ಆರ್ಟಿಕಲ್ ಅನ್ನು ದುರ್ಬಳಕೆ ಮಾಡಿ ಇ-ಸ್ವತ್ತು ತಂತ್ರಾಂಶದಿಂದ ಮಾಹಿತಿ ಪಡೆಯದೇ ನೋಂದಾಯಿಸಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ.

