HomeKarnatakaಬೆಳೆಗಾರನಿಂದ ಉದ್ಯಮಿಯೆಡೆಗೆ: ಅನ್ನದಾತರ ಆದಾಯ ಹೆಚ್ಚಿಸಲು ವಿಶಿಷ್ಟ ಯೋಜನೆ: ರಾಜ್ಯದ ರೈತ ಉತ್ಪಾದಕ ಸಂಘಗಳಿಗೆ 'ಕಾರ್ಪೊರೇಟ್...

ಬೆಳೆಗಾರನಿಂದ ಉದ್ಯಮಿಯೆಡೆಗೆ: ಅನ್ನದಾತರ ಆದಾಯ ಹೆಚ್ಚಿಸಲು ವಿಶಿಷ್ಟ ಯೋಜನೆ: ರಾಜ್ಯದ ರೈತ ಉತ್ಪಾದಕ ಸಂಘಗಳಿಗೆ ‘ಕಾರ್ಪೊರೇಟ್ ಟಚ್’

ಬೆಂಗಳೂರು: ರಾಜ್ಯದ ರೈತ ಉತ್ಪಾದಕ ಸಂಸ್ಥೆಗಳನ್ನು(ಎಫ್‌ಪಿಒ) ಆರ್ಥಿಕವಾಗಿ ಬಲಪಡಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯೊಂದಿಗೆ, ತೋಟಗಾರಿಕಾ ಇಲಾಖೆ ಬೆಂಬಲಿತ ‘ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರ’ (ಸಿಒಇ – ಎಫ್‌ಪಿಒ) ಹಾಗೂ ‘ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್’ (ಎನ್‌ಇಎನ್‌) ಜಂಟಿಯಾಗಿ ಕರ್ನಾಟಕದಲ್ಲಿ  ‘ವಾಧ್ವಾನಿ ಎಫ್‌ಪಿಒ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ’ ಅನ್ನು ಆರಂಭಿಸಿವೆ.

ರೈತರು ಕೇವಲ ಬೆಳೆಗಾರರಾಗಿ ಉಳಿಯದೆ, ಯಶಸ್ವಿ ಉದ್ಯಮಿಗಳಾಗಿ ಬೆಳೆಯಬೇಕು ಎಂಬ ದಿಸೆಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮೊದಲ ಹಂತವಾಗಿ ರಾಜ್ಯದ 27 ಎಫ್‌ಪಿಒಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದ್ದು, ಇವುಗಳನ್ನು ಸುಸ್ಥಿರ ಮತ್ತು ಲಾಭದಾಯಕ ವ್ಯವಹಾರಗಳನ್ನಾಗಿ ಪರಿವರ್ತಿಸಲು ಅಗತ್ಯವಾದ ಬ್ಯುಸಿನೆಸ್ ಪ್ಲಾನ್, ಮಾರುಕಟ್ಟೆ ಸಂಪರ್ಕ ಮತ್ತು ವ್ಯವಹಾರ ತಂತ್ರಗಳನ್ನು ಹೇಳಿಕೊಡಲಾಗುತ್ತದೆ.

ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಉಪಕ್ರಮದ ಮೊದಲ ಹೆಜ್ಜೆಯಾಗಿ ಸಿಒಇ – ಎಫ್‌ಪಿಒ ವತಿಯಿಂದ ‘ಗ್ರೋತ್ ಬೂಟ್‌ಕ್ಯಾಂಪ್’ ಆಯೋಜಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದರಲ್ಲಿ ರಾಜ್ಯಾದ್ಯಂತ ಆಯ್ಕೆಯಾದ 27 ಎಫ್‌ಪಿಒಗಳ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಕೃಷಿ-ಉದ್ಯಮ ತಜ್ಞರು ಸೇರಿ 60ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ತೋಟಗಾರಿಕಾ ಇಲಾಖೆಯ ಡಾ. ಮಂಜುನಾಥ್ ಎನ್, ಸಿಒಇ – ಎಫ್‌ಪಿಒ ನಿರ್ದೇಶಕ ಡಾ. ವಾಸುದೇವ ಕೆ.ಆರ್ ಮತ್ತು ಉಪನಿರ್ದೇಶಕ ಡಾ. ಸದಾನಂದ ಜಿ.ಕೆ ಉಪಸ್ಥಿತರಿದ್ದರು. ಕೃಷಿ-ಉದ್ಯಮ ತಜ್ಞರಾದ ರಾಘವೇಂದ್ರ ಸಿಂಗ್ ಮತ್ತು ಸಂಜೀವ್ ರಾಥೋಡ್ ಅವರು ರೈತರಿಗೆ ವಿಶೇಷ ಮಾರ್ಗದರ್ಶನ ನೀಡಿದರು.

ಬೂಟ್‌ ಕ್ಯಾಂಪ್‌ ನಲ್ಲಿ ಪ್ರತಿಯೊಂದು ಎಫ್‌ಪಿಒಗೂ ತಮ್ಮ ಮುಂದಿನ 12 ತಿಂಗಳ ಆದ್ಯತೆಯ ವ್ಯವಹಾರವನ್ನು ಗುರುತಿಸಲು ಮತ್ತು ಅಭಿವೃದ್ಧಿಪಡಿಸಲು ‘ಗ್ರೋತ್ ಸ್ಟ್ರಾಟಜಿ ವರ್ಕ್‌ಬುಕ್’ ನೀಡಲಾಯಿತು.

10 ವಾರಗಳ ಕಾಲ ವಿಶೇಷ ತರಬೇತಿ

ಬೂಟ್‌ ಕ್ಯಾಂಪ್‌ ನಲ್ಲಿ ಭಾಗವಹಿಸಿದ ಈ 27 ಎಫ್‌ಪಿಒಗಳು ಈಗ ಎನ್‌ಇಎನ್‌ನ ‘ಡಬ್ಲ್ಯೂಇಐ ಪ್ಲಾಟ್‌ಫಾರ್ಮ್’ ಮೂಲಕ 10 ವಾರಗಳ ಕಾಲ ನಿರಂತರ ವ್ಯವಸ್ಥಿತ ತರಬೇತಿ ಪಡೆಯಲಿವೆ. ಈ ಅವಧಿಯಲ್ಲಿ ತಜ್ಞರೊಂದಿಗೆ ಮುಖಾಮುಖಿ ಚರ್ಚೆ, ದೇಶೀಯ ಹಾಗೂ ರಫ್ತು ಮಾರುಕಟ್ಟೆಯ ಪರಿಚಯ, ಖರೀದಿದಾರರ ಸಂಪರ್ಕ ಸೇರಿದಂತೆ ಹಲವು ಪ್ರಾಯೋಗಿಕ ಜ್ಞಾನವನ್ನು ಒದಗಿಸಲಾಗುತ್ತದೆ.

ಈ ಬಗ್ಗೆ ಮಾತನಾಡಿದ ಸಿಒಇ – ಎಫ್‌ಪಿಒ ನಿರ್ದೇಶಕ ಡಾ. ವಾಸುದೇವ್ ಕೆ.ಆರ್, “ರೈತರ ಆದಾಯ ಹೆಚ್ಚಿಸುವಲ್ಲಿ ಮತ್ತು ಮಾರುಕಟ್ಟೆ ಒದಗಿಸುವಲ್ಲಿ ಎಫ್‌ಪಿಒಗಳ ಪಾತ್ರ ಬಹುಮುಖ್ಯ. ಈ ಹೊಸ ವಾಧ್ವಾನಿ ಕಾರ್ಯಕ್ರಮದ ಮೂಲಕ ಎಫ್‌ಪಿಒಗಳು ಕೇವಲ ಆಶಯಗಳಿಗೆ ಸೀಮಿತವಾಗದೆ, ವ್ಯವಸ್ಥಿತವಾದ ಬ್ಯುಸಿನೆಸ್ ಪ್ಲಾನ್ ಮಾಡಿಕೊಂಡು ಮುನ್ನಡೆಯಲು ತಜ್ಞರ ಮಾರ್ಗದರ್ಶನ ಸಿಗಲಿದೆ. ರಾಜ್ಯದ ಎಫ್‌ಪಿಒಗಳು ಲಾಭದಾಯಕತೆಯತ್ತ ಹೆಜ್ಜೆ ಇಡುತ್ತಿರುವುದು ಸಂತಸದ ವಿಚಾರ,” ಎಂದರು.

ಇನ್ನು ಎನ್‌ಇಎನ್‌ನ ನೆಟ್‌ವರ್ಕ್ಸ್‌ ವಿಭಾಗದ ಇವಿಪಿ ರವಿಶಂಕರ್‌ ಅವರು, “ಸೂಕ್ತ ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಸಿಕ್ಕಿದರೆ, ಎಫ್‌ಪಿಒಗಳು ಪ್ರಬಲ ಗ್ರಾಮೀಣ ಉದ್ಯಮಗಳಾಗಿ ಬೆಳೆಯಬಲ್ಲವು. ರೈತ ನೇತೃತ್ವದ ಈ ಸಂಸ್ಥೆಗಳ ಅಡೆತಡೆಗಳನ್ನು ನಿವಾರಿಸಿ, ವ್ಯವಹಾರವನ್ನು ವಿಸ್ತರಿಸಲು ಈ ಕಾರ್ಯಕ್ರಮ ನೆರವಾಗಲಿದೆ. ಗ್ರಾಮೀಣ ಮಟ್ಟದಲ್ಲಿ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಸುವುದೇ ನಮ್ಮ ಪ್ರಮುಖ ಗುರಿ,” ಎಂದು ವಿವರಿಸಿದರು.

ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್ (ಎನ್‌ಇಎನ್‌ ಟ್ರಸ್ಟ್‌) ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಭಾರತದಲ್ಲಿ ಉದ್ಯಮಶೀಲತೆ, ನಾವೀನ್ಯತೆ ಮತ್ತು ಆರ್ಥಿಕತೆಯ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ‘ವಾಧ್ವಾನಿ ಆಪರೇಟಿಂಗ್ ಫೌಂಡೇಶನ್’ನ ಆರ್ಥಿಕ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಹೂಡಿಕೆದಾರರೊಂದಿಗೆ ಸೇರಿ ವ್ಯವಹಾರಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular