ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್-ರೇವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತವೊಂದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಅತಿವೇಗವಾಗಿ ಬಂದ ಅಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯಕ್ಕೆ ಸೈಕಲ್‌ನಲ್ಲಿ ತೆರಳುತ್ತಿದ್ದ ಇಬ್ಬರು ಬಾಲಕರು ಬಲಿಯಾಗಿದ್ದಾರೆ. ಈ ಭೀಕರ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
40 ಮೀಟರ್ ಎಳೆದೊಯ್ದ ಅಂಬ್ಯುಲೆನ್ಸ್ ಘಟನೆಯಲ್ಲಿ ಕಾಂತಿ ಗ್ರಾಮದ ನಿವಾಸಿಗಳಾದ ರಿಂಕು ಪಟೇಲ್ (15) ಮತ್ತು ಶೋಭಿತ್ ಪಟೇಲ್ (12) ಎಂಬುವವರು ಮೃತಪಟ್ಟಿದ್ದಾರೆ. ಇವರಿಬ್ಬರು ಸೈಕಲ್‌ನಲ್ಲಿ ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಅಂಬ್ಯುಲೆನ್ಸ್ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಂಕು ಅಂಬ್ಯುಲೆನ್ಸ್‌ನ ಮುಂಭಾಗದಲ್ಲಿ ಸಿಲುಕಿಕೊಂಡಿದ್ದು, ಸುಮಾರು 40 ಮೀಟರ್ ದೂರದವರೆಗೆ ಆತನನ್ನು ಎಳೆದೊಯ್ಯಲಾಗಿದೆ. ರಿಂಕು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ಶೋಭಿತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಚಾಲಕನಿಗೆ ಧರ್ಮದೇಟು ನೀಡಿದ ಸಾರ್ವಜನಿಕರು ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಅಂಬ್ಯುಲೆನ್ಸ್ ಚಾಲಕನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದಿದ್ದಾರೆ. ಚಾಲಕ ಮದ್ಯಪಾನ ಮಾಡಿದ್ದ ಎಂದು ಸಾರ್ವಜನಿಕರು ಆರೋಪಿಸಿದ್ದು, ಆತನಿಗೆ ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಅಪಘಾತದ ನಂತರ ಪ್ರಯಾಗ್‌ರಾಜ್-ರೇವಾ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಭೀತಿ ರಾಷ್ಟ್ರೀಯ ಹೆದ್ದಾರಿ 30 ರಲ್ಲಿ ಅಂಬ್ಯುಲೆನ್ಸ್ ಮತ್ತು ಭಾರೀ ವಾಹನಗಳು ಅತಿವೇಗವಾಗಿ ಚಲಿಸುತ್ತಿರುವುದೇ ಇಂತಹ ಅಪಘಾತಗಳಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಎಸಿಪಿ ಅಬ್ದುಸ್ ಸಲಾಮ್ ಖಾನ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಚಾಲಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

