ಬೆಂಗಳೂರು- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮೂಲಕ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ಅಕ್ರಮ ಪ್ರಕರಣದ ತನಿಖೆ ಇಂದಿನಿಂದ ವಿಶೇಷ ತನಿಖಾ ತಂಡ (ಎಸ್ಐಟಿ) ಕೈಗೆತ್ತಿಕೊಂಡಿದೆ. ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿರುವ ಎಸ್ಐಟಿ, ಪ್ರಕರಣದ ಹಿಂದಿನ ತನಿಖೆಯ ಸಂಪೂರ್ಣ ದಾಖಲೆಗಳನ್ನು ಪಡೆದು ಸಮಗ್ರ ವಿಚಾರಣೆ ಆರಂಭಿಸಲಿದೆ.
ಎಡಿಜಿಪಿ ಆರ್. ಹಿತೇಂದ್ರ ಅವರ ನೇತೃತ್ವದಲ್ಲಿ ಐವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ರಚಿಸಲಾಗಿದೆ. ತನಿಖೆಗೆ ಅಗತ್ಯವಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಇಂದು ನಿಯೋಜಿಸಲಾಗುತ್ತಿದ್ದು, ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಕೇಸ್ಫೈಲ್ಗಳನ್ನು ಸಿಐಡಿ ಅಧಿಕಾರಿಗಳಿಂದ ಎಸ್ಐಟಿಗೆ ವರ್ಗಾಯಿಸಲಾಗುತ್ತದೆ.
ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವೈದ್ಯ ಮಂಜುನಾಥ್ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಇದೇ ವೇಳೆ ಕೆಪಿಎಸ್ಸಿ ಅಸಿಸ್ಟೆಂಟ್ ಸೆಕ್ರೆಟರಿ ಶೋಭಾ ದಾಖಲಿಸಿದ್ದ 50 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣವೂ ಎಸ್ಐಟಿ ತನಿಖೆಯ ವ್ಯಾಪ್ತಿಗೆ ಬರಲಿದೆ.
ಇದರೊಂದಿಗೆ ಸುಮಾ ಸಾಹುಕಾರ್ ವಿರುದ್ಧ ದಾಖಲಾಗಿರುವ ಪ್ರಕರಣವೂ ತನಿಖೆಗೆ ಒಳಪಡಲಿದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಈ ಪ್ರಕರಣದ ದಾಖಲೆಗಳನ್ನೂ ಎಸ್ಐಟಿ ಪರಿಶೀಲಿಸಲಿದೆ.
ಹಿಂದಿನ ತನಿಖೆಯ ದಾಖಲೆಗಳ ಪರಿಶೀಲನೆ
ಮೊದಲ ಹಂತದಲ್ಲಿ ಈ ಹಿಂದೆ ಸಿಐಡಿ ನಡೆಸಿದ್ದ ತನಿಖೆಯ ಸಂಪೂರ್ಣ ಕೇಸ್ಫೈಲ್, ದಾಖಲೆಗಳು, ಸಾಕ್ಷ್ಯಗಳು ಹಾಗೂ ಅಧಿಕಾರಿಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಎಸ್ಐಟಿ ಪರಿಶೀಲಿಸಲಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಮುಖ ಪ್ರಕರಣಗಳ ತನಿಖೆಯನ್ನೂ ತಂಡ ಕೈಗೆತ್ತಿಕೊಳ್ಳಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು, ದೂರು ನೀಡಿರುವ ಅಭ್ಯರ್ಥಿಗಳು ಹಾಗೂ ಇತರೆ ಸಂಬಂಧಿತ ವ್ಯಕ್ತಿಗಳ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸುವ ಸಾಧ್ಯತೆ ಇದೆ. ಆರೋಪಗಳ ಸ್ವರೂಪ ಹಾಗೂ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ.
ಇತರೆ ಪರೀಕ್ಷಾ ಅಕ್ರಮಗಳಿಗೂ ತನಿಖೆ ವಿಸ್ತರಣೆ ಸಾಧ್ಯತೆ
ಪಶುವೈದ್ಯಾಧಿಕಾರಿಗಳ ನೇಮಕಾತಿ ಹಾಗೂ 50 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕರಣಗಳ ತನಿಖೆಯ ಜೊತೆಗೆ, ಕೆಪಿಎಸ್ಸಿಗೆ ಸಂಬಂಧಿಸಿದ ಇತರೆ ಪರೀಕ್ಷಾ ಅಕ್ರಮಗಳ ಕುರಿತು ಯಾವುದೇ ಮಾಹಿತಿ ಅಥವಾ ಸಾಕ್ಷ್ಯಗಳು ಬೆಳಕಿಗೆ ಬಂದರೆ ಅವುಗಳನ್ನೂ ಎಸ್ಐಟಿ ಪರಿಶೀಲಿಸುವ ಸಾಧ್ಯತೆ ಇದೆ.
ತನಿಖೆ ವೇಳೆ ಹೊಸ ಅಕ್ರಮಗಳು ಪತ್ತೆಯಾದಲ್ಲಿ, ಅವುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಎಸ್ಐಟಿಗೆ ಅವಕಾಶವಿದೆ. ಹೀಗಾಗಿ ಈಗಾಗಲೇ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಸೀಮಿತವಾಗದೆ, ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರಬಹುದಾದ ಇತರೆ ಅಕ್ರಮಗಳ ಬಗ್ಗೆಯೂ ತನಿಖೆ ವಿಸ್ತರಿಸುವ ಸಾಧ್ಯತೆ ಇದೆ.
ಹೈಕೋರ್ಟ್ ನಿರ್ದೇಶನದಂತೆ ನಡೆಯುತ್ತಿರುವ ಈ ತನಿಖೆಯಲ್ಲಿ ಹಿಂದಿನ ಪ್ರಕರಣಗಳ ಸಂಪೂರ್ಣ ಹಿನ್ನೆಲೆ, ದಾಖಲೆಗಳು, ಅಭ್ಯರ್ಥಿಗಳ ಹೇಳಿಕೆಗಳು ಹಾಗೂ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲು ಎಸ್ಐಟಿ ಮುಂದಾಗಿದೆ. ಈ ಮೂಲಕ ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಹೊಸ ಹಂತಕ್ಕೆ ಪ್ರವೇಶಿಸಿದ್ದು, ಇಂದಿನಿಂದ ಅಧಿಕೃತವಾಗಿ ಎಸ್ಐಟಿ ತನಿಖೆ ಆರಂಭವಾಗಿದೆ.

