ಕೇಂದ್ರ ಚುನಾವಣಾ ಆಯೋಗ 4 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ ವಿಧಾಸನಭೆ ಚುನಾವಣೆ ದಿನಾಂಕ ಘೋಷಣೆ ಮಾಡಲು ತಯಾರಿ ನಡೆಸಿದೆ. ಮೂಲಗಳ ಮಾಹಿತಿ ಪ್ರಕಾರ ಮಾರ್ಚ್ 10ರ ಬಳಿಕ ಯಾವಾಗಲಾದರೂ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಲಿದೆ.
ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಬೇಕಿದೆ. ಕೇಂದ್ರ ಚುನಾವಣಾ ಆಯೋಗದ ತಂಡ ಎಲ್ಲಾ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ವೇಳಾಪಟ್ಟಿ ಘೋಷಣೆ ಮಾಡಲಿದೆ.
4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶಕ್ಕೆ ಮಾರ್ಚ್ 10ರೊಳಗೆ ಕೇಂದ್ರ ಚುನಾವಣಾ ಆಯೋಗದ ತಂಡ ಭೇಟಿ ನೀಡಲಿದ್ದು, ಚುನಾವಣಾ ಸಿದ್ಧತೆಗಳ ಕುರಿತು ಸಭೆಗಳನ್ನು ನಡೆಸಲಿದೆ. ಬಳಿಕ ಅಂದರೆ ಮಾರ್ಚ್ 10ರ ನಂತರ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ.
ವಿಧಾನಸಭೆ ಅವಧಿ ಮುಕ್ತಾಯ ಯಾವಾಗ?
- ಪಶ್ಚಿಮ ಬಂಗಾಳ ಮೇ 7
- ತಮಿಳುನಾಡು ಮೇ 10
- ಅಸ್ಸಾಂ ಮೇ 20
- ಕೇರಳ ಮೇ 23
- ಪುದುಚೇರಿ ಜೂನ್ 1
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡ ಈಗಾಗಲೇ ಮೂರು ರಾಜ್ಯಗಳಿಗೆ ಭೇಟಿ ನೀಡಿದೆ. ಮಾರ್ಚ್ 6, 7ರಂದು ಕೇರಳ, ಮಾರ್ಚ್ 9ರಂದು ಪಶ್ಚಿಮ ಬಂಗಾಳಕ್ಕೆ ತಂಡ ಭೇಟಿ ನೀಡಲಿದೆ.
ಈಗಾಗಲೇ ಈ ಎಲ್ಲಾ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡಿದೆ. ಆದ್ದರಿಂದ ಮಾರ್ಚ್ 10ರ ಬಳಿಕ ಚುನಾವಣಾ ದಿನಾಂಕ ನಿಗದಿ ಮಾಡಲಾಗುತ್ತದೆ. ಎಸ್‌ಐಆರ್ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾರಣಕ್ಕೆ ಹಲವು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತದೆ. ಉಳಿದ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುವ ನಿರೀಕ್ಷೆ ಇದೆ.
2021ರಲ್ಲಿ ಪಶ್ಚಿಮ ಬಂಗಾಳದಲ್ಲಿ 8, ಅಸ್ಸಾಂನಲ್ಲಿ 3 ಹಂತದಲ್ಲಿ ಮತದಾನ ನಡೆಸಲಾಗಿತ್ತು. ಮಾರ್ಚ್ 1ರಿಂದಲೇ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.
ಈ ಚುನಾವಣೆ ಘೋಷಣೆ ಸಮಯದಲ್ಲಿಯೇ ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡುವ ನಿರೀಕ್ಷೆ ಇದೆ.

