ನಿನ್ನೆ ( ಏಪ್ರಿಲ್ 23 ) ತಮಿಳುನಾಡಿನ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ಪ್ರಕ್ರಿಯೆ ಜರುಗಿತು. ತಮಿಳುನಾಡು ಇತಿಹಾಸದಲ್ಲೇ ಆಗದಷ್ಟು ದಾಖಲೆಯ 84.69% ಮತದಾನ ನಡೆದಿದ್ದು, ಇದು ಚುನಾವಣೆ ಪೈಪೋಟಿಗೆ ಹಿಡಿದ ಕೈಗನ್ನಡಿಯಾಗಿದೆ.
ಇಷ್ಟು ವರ್ಷಗಳ ಕಾಲ ಡಿಎಂಕೆ ಹಾಗೂ ಎಐಡಿಎಂಕೆ ನಡುವಿನ ಜಿದ್ದಾಜಿದ್ದಿಯಾಗಿದ್ದ ತಮಿಳುನಾಡು ರಾಜಕೀಯದಲ್ಲಿ ಈ ಬಾರಿ ನಟ ವಿಜಯ್ ನೇತೃತ್ವದ ಟಿವಿಕೆ ಆಗಮನವಾಗಿದ್ದು ಮತಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುವುದಕ್ಕೆ ಕಾರಣ ಎನ್ನಬಹುದು.
ತಮಿಳುನಾಡಿನ ಎಲ್ಲೆಡೆ ಬಹುತೇಕ ಶಾಂತಿಯುತ ಮತದಾನ ನಡೆದಿದ್ದು, ಕೆಲವೊಂದು ಕಡೆ ಕಳ್ಳ ಮತದಾನದ ಕುರಿತು ವರದಿಗಳಾಗಿವೆ. ಡಿಎಂಕೆ ಬೆಂಬಲಿಗರು ತ್ರಿಚಿ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಮಧ್ಯರಾತ್ರಿ ಬೂತ್ ತೆರೆದು ಕಳ್ಳ ಮತ ಸೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸಮಯಪುರಂ ವಾರ್ಡಿನಲ್ಲಿ ಟಿವಿಕೆಗೆ ಮತ ಹಾಕಿ ಎಂದರೆ ಅಧಿಕಾರಿ ಡಿಎಂಕೆ ಬಟನ್ ಒತ್ತಿದರು ಎಂದು ವೃದ್ಧೆಯೊಬ್ಬರು ಆರೋಪ ಮಾಡಿದ್ದರು.
ಹೀಗೆ ಮತದಾನದ ದಿನ ಕೆಲವೆಡೆ ಈ ರೀತಿಯ ಆರೋಪಗಳು ಕೇಳಿಬಂದಿದ್ದು, ಇದೀಗ ನಟಿ ಅಕ್ಷಯ ಹರಿಹರನ್ ತನ್ನ ಮತವನ್ನು ಬೇರೊಬ್ಬರು ಚಲಾಯಿಸಿದ್ದರು ಎಂಬ ಗಂಭೀರ ಆರೋಪ ಮಾಡಿ ವೋಟ್ ಚೋರಿ ನೆನಪಿಸಿದ್ದಾರೆ.
ಈ ಕುರಿತು ವಿಡಿಯೊ ಹಂಚಿಕೊಂಡಿರುವ ಅಕ್ಷಯ ಹರಿಹರನ್ ‘ನನ್ನ ಮತವನ್ನು ಈಗಾಗಲೇ ಬೇರೆ ಯಾರೋ ಚಲಾಯಿಸಿದ್ದಾರೆ. ನಿಜವಾಗಿಯೂ ಇದು ಆಶ್ಚರ್ಯಕರವಾಗಿದೆ. ನಾನು ವೇಲಚೇರಿಯವಳಾಗಿದ್ದು, ನನಗೆ ಮತದಾನದ ಸ್ಲಿಪ್ ನೀಡರಲಿಲ್ಲ. ಹೀಗಾಗಿ ಆನ್‌ಲೈನ್‌ನಲ್ಲಿ ನನ್ನ ಮಾಹಿತಿಗಳನ್ನು ಹಾಕಿ ನೋಡಿದಾಗ ನಾನು ಮತ ಹಾಕಬೇಕಿದ್ದ ಬೂತ್ ಅಡಯಾರ್ ಎಂಬುದು ತಿಳಿದುಬಂತು. ಅಲ್ಲಿ ಹೋಗಿ ನೋಡಿದರೆ ನನ್ನ ಬದಲಾಗಿ ಬೇರೆ ಯಾರೋ ಮತ ಹಾಕಿದ್ದಾರೆ. 24 ವರ್ಷದವರು ಎಂದು ಹೇಳಿಕೊಂಡಿದ್ದ ಬೇರೆ ಯಾರದ್ದೋ ಫೋಟೊ ಇತ್ತು ಹಾಗೂ ಫಿಂಗರ್‌ಪ್ರಿಂಟ್ ಇತ್ತು. ನಾನು ಈ ಕುರಿತು ಪ್ರಶ್ನಿಸಿದಾಗ ನನ್ನ ದ್ವಿತೀಯ ಹೆಸರೇನು ಎಂದು ಕೇಳಿದರು. ಹರಿಹರನ್ ಎಂದು ಹೇಳಿದಾಗ ಎಲ್ಲವೂ ಸರಿಯಿತ್ತು, ಆದರೆ ಫೋಟೊ ಮಾತ್ರ ಬೇರೆಯವರದ್ದಿತ್ತು. ಇದೇ ರೀತಿ ಮೊದಲು ಬಂದ ವ್ಯಕ್ತಿ ಬಳಿ ಮಾಹಿತಿಗಳನ್ನು ದೃಢಪಡಿಸಿಕೊಂಡು, ಆಧಾರ್ ಕಾರ್ಡ್ ಪರಿಶೀಲಿಸಬೇಕಿತ್ತು, ಅದನ್ನು ಮಾಡದೇ ಹೇಗೆ ಬಿಟ್ಟರೋ ಅರ್ಥವಾಗುತ್ತಿಲ್ಲ. ಕೊನೆಗೆ ಚಾಲೆಂಜ್ ವೋಟ್ ಮಾಡಿ ಬಂದೆ. ಅದೂ ಸಹ ಪೇಪರ್ ವೋಟ್ ಆಗಿತ್ತು, ಸರಿಯಾಗಿ ಸೀಲ್ ಸಹ ಆಗಲಿಲ್ಲ, ಅದರ ಮೇಲೆ ನನಗೆ ನಂಬಿಕೆ ಇಲ್ಲ’ ಎಂದು ತಿಳಿಸಿದ್ದಾರೆ.

