ಸಾಮಾನ್ಯವಾಗಿ ಪಲಾವ್ ಎಂದರೆ ಎಲ್ಲರಿಗೂ ಇಷ್ಟ. ಆದರೆ ಯಾವಾಗಲೂ ಒಂದೇ ರೀತಿಯ ಪಲಾವ್ ತಿಂದು ಬೇಸರವಾಗಿದ್ದರೆ, ಭಾರತೀಯ ಉಪ್ಪಿನಕಾಯಿಯ ಘಮ ಮತ್ತು ರುಚಿಯನ್ನು ಒಳಗೊಂಡಿರುವ ‘ಅಚಾರಿ ಚನಾ ಪಲಾವ್’ ತಯಾರಿಸಬಹುದು. ಕಾಬೂಲಿ ಕಡಲೆ ಮತ್ತು ಮಸಾಲೆಗಳ ಸಮ್ಮಿಶ್ರಣವಿರುವ ಈ ಅಡುಗೆ ಆರೋಗ್ಯಕ್ಕೂ ಉತ್ತಮ ಮತ್ತು ರುಚಿಯಲ್ಲೂ ಅದ್ಭುತ.
ಅಚಾರಿ ಚನಾ ಪಲಾವ್ ತಯಾರಿಸಲು ಬೇಕಾಗುವ ಪದಾರ್ಥಗಳು:
- ಬಾಸ್ಮತಿ ಅಕ್ಕಿ – 1 ಕಪ್ (30 ನಿಮಿಷ ನೆನೆಸಿಟ್ಟಿದ್ದು)
- ಬೆಂದ ಕಾಬೂಲಿ ಕಡಲೆ (ಚನಾ) – 1 ಕಪ್
- ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
- ಟೊಮೆಟೊ – 1 (ಹೆಚ್ಚಿದ್ದು)
- ಮಿಶ್ರ ತರಕಾರಿಗಳು (ಕ್ಯಾರೆಟ್, ಬಟಾಣಿ, ಮಶ್ರೂಮ್, ಬೆಲ್ ಪೆಪ್ಪರ್) – ಕಾಲು ಕಪ್
- ಅಡುಗೆ ಎಣ್ಣೆ – 2 ಚಮಚ
- ಜೀರಿಗೆ – 1 ಚಮಚ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಉಪ್ಪಿನಕಾಯಿ (ನಿಮ್ಮಿಷ್ಟದ ಯಾವುದೇ ಉಪ್ಪಿನಕಾಯಿ) – 2 ಚಮಚ
- ಅರಿಶಿನ ಪುಡಿ – ಅರ್ಧ ಚಮಚ
- ಕೆಂಪು ಮೆಣಸಿನ ಪುಡಿ – 1 ಚಮಚ
- ಧನಿಯಾ ಪುಡಿ – 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
- ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣು.
ತಯಾರಿಸುವ ವಿಧಾನ:
- ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ ಚಿಟಪಟ ಎನ್ನಲು ಬಿಡಿ.
- ನಂತರ ಈರುಳ್ಳಿ ಸೇರಿಸಿ ಅದು ತಿಳಿ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
- ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ, ಬಳಿಕ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ.
- ಈಗ ಹೆಚ್ಚಿದ ಮಿಶ್ರ ತರಕಾರಿಗಳನ್ನು ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ.
- ನಂತರ ಉಪ್ಪಿನಕಾಯಿ, ಅರಿಶಿನ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿ.
- ಈ ಮಸಾಲೆಗೆ ಬೆಂದ ಕಾಬೂಲಿ ಕಡಲೆ ಮತ್ತು ನೆನೆಸಿದ ಅಕ್ಕಿಯನ್ನು ಹಾಕಿ ಮೆಲ್ಲಗೆ ಕೈಯಾಡಿಸಿ.
- 2 ಕಪ್ ನೀರು ಸುರಿದು ಕುದಿಯಲು ಬಿಡಿ. ನಂತರ ಉರಿಯನ್ನು ಕಡಿಮೆ ಮಾಡಿ ಮುಚ್ಚಳ ಮುಚ್ಚಿ 15-20 ನಿಮಿಷ ಅಕ್ಕಿ ಹದವಾಗಿ ಬೇಯುವವರೆಗೆ ಬೇಯಿಸಿ.
- ಪಲಾವ್ ಬೆಂದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಯಾಗಿರುವಾಗಲೇ ನಿಂಬೆ ಹಣ್ಣಿನ ರಸದೊಂದಿಗೆ ಸರ್ವ್ ಮಾಡಿ.
ಈ ಚನಾ ಪಲಾವ್ ಮೊಸರು ಬಜ್ಜಿ ಅಥವಾ ರೈತಾದೊಂದಿಗೆ ಸವಿಯಲು ಬಹಳ ರುಚಿಯಾಗಿರುತ್ತದೆ. ವಿಶೇಷ ದಿನಗಳಲ್ಲಿ ಅಥವಾ ಲಂಚ್ ಬಾಕ್ಸ್‌ಗೆ ಇದು ಅತ್ಯುತ್ತಮ ಆಯ್ಕೆ.

