ದೇಗುಲಗಳ ಪಾವಿತ್ರ್ಯತೆ, ಶಿಷ್ಟಾಚಾರ, ಸಂಸ್ಕೃತಿ ಕಾಪಾಡಲು ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಪ್ರಮುಖ ತೀರ್ಮಾನವನ್ನು ಕೈಗೊಂಡಿದೆ. ರಾಜ್ಯದ 500ಕ್ಕೂ ಅಧಿಕ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಹಿಂದೂ ಜನ ಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕ ಹಾಗೂ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಮುಖ್ಯ ಆಯೋಜಕ ಚಂದ್ರ ಮೊಗವೀರ, ಬುಧವಾರದಂದು ಹಾಸನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರ ಸಂಹಿತೆ ಜಾರಿಗೊಳಿಸಲಾಗುತ್ತಿದ್ದು, ಪ್ರತಿ ದೇವಸ್ಥಾನದ ಮುಂಭಾಗದಲ್ಲಿ ವಸ್ತ್ರ ಸಂಹಿತೆಯ ಫಲಕ ಹಾಕಲಾಗುತ್ತದೆ. ಮಹಿಳೆಯರು ಚೂಡಿದಾರ್, ಲಂಗ ದಾವಣಿ, ಸಲ್ವಾರ್, ಕುರ್ತಾ ಅಥವಾ ಸೀರೆ ಧರಿಸಬೇಕಿದ್ದು, ಪುರುಷರು ಕುರ್ತಾ, ಧೋತಿ, ಲುಂಗಿ, ಪೈಜಾಮ ಅಥವಾ ಸಾಮಾನ್ಯ ಪ್ಯಾಂಟ್ – ಶರ್ಟ್ ಧರಿಸಬೇಕಿದೆ.
ಸ್ಕರ್ಟ್, ಮಿಡಿ, ಶಾರ್ಟ್ ಪ್ಯಾಂಟ್, ನೈಟ್ ಡ್ರೆಸ್, ಜೀನ್ಸ್ ಸ್ಯಾಂಡೋ ವೆಸ್ಟ್, ಸ್ಲೀವ್ಲೆಸ್ ಡ್ರೆಸ್ ಧರಿಸಿ ಭಕ್ತರು ದೇಗುಲಕ್ಕೆ ಬರಬಾರದು. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತ್ರ ಧರಿಸಬೇಕು ಎಂದು ಚಂದ್ರ ಮೊಗವೀರ ಮನವಿ ಮಾಡಿದ್ದಾರೆ.