ರಾಮನಗರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ಇರಲಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಕೋಟೆ ಮೈದಾನದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ಇರಲಿವೆ. ಬಡ ಜನರ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಧಿಕಾರಕ್ಕೆ ಬಂದ ಕೇವಲ ಆರು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮರುಕ್ಷಣದಿಂದಲೇ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಲು, ಎಷ್ಟು ಜನರಿಗೆ ನಮ್ಮ ಗ್ಯಾರಂಟಿ ಯೋಜನೆಗಳು ತಲುಪಿವೆ ಎನ್ನುವುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಎಲ್ಲ ಕಡೆ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಡಿ.ಕೆ.ಸುರೇಶ್, ಮಾಗಡಿ ಕ್ಷೇತ್ರದ ಶಾಸಕರಾದ ಎಚ್.ಸಿ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಮಾಜಿ ಶಾಸಕರಾದ ರಾಜು, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ವಿವಿಧ ಇಲಾಖೆಯ ಅಧಿಕಾರಿಗಳು, ಅಪಾರ ಸಂಖ್ಯೆಯ ಮಹಿಳೆಯರು ಉಪಸ್ಥಿತರಿದ್ದರು.