ಉದ್ದಿನ ಬೇಳೆ ಮತ್ತು ಕಡಲೆಬೇಳೆಯಿಂದ ಮಾಡುವ ಸ್ನಾಕ್ಸ್ ಇದು. ಕಾಯಿ ಚಟ್ನಿ ಅಥವಾ ಟೊಮೆಟೋ ಚಟ್ನಿ ಮಸಾಲಾ ವಡೆಗೆ ಒಳ್ಳೆ ಕಾಂಬಿನೇಶನ್. ಸಂಜೆ ಚಹಾ ಅಥವಾ ಕಾಫಿ ಜೊತೆಗೆ ಸವಿಯಬಹುದು. ಉಡುಪಿ ಮತ್ತು ಮಂಗಳೂರಿನಲ್ಲಿ ಇದು ಹೆಚ್ಚು ಜನಪ್ರಿಯವಾಗಿರುವ ತಿನಿಸು.
ಬೇಕಾಗುವ ಸಾಮಗ್ರಿ : 1 ಕಪ್ ಕಡಲೆಬೇಳೆ, 2 ಚಮಚ ಉದ್ದಿನ ಬೇಳೆ, 3 ಕೆಂಪು ಮೆಣಸಿನ ಕಾಯಿ, ಹೆಚ್ಚಿದ ಒಂದು ಹಸಿಮೆಣಸಿನ ಕಾಯಿ, 1 ಇಂಚು ಶುಂಠಿ ತುರಿದದ್ದು, ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ : ಮೊದಲು ದೊಡ್ಡ ಬೌಲ್ ನಲ್ಲಿ ಕಡಲೆಬೇಳೆ, ಉದ್ದಿನಬೇಳೆ ಮತ್ತು 3 ಕೆಂಪುಮೆಣಸಿನಕಾಯಿಯನ್ನು 2 ಗಂಟೆ ನೆನೆಸಿಡಿ. ನೀರನ್ನು ಪೂರ್ತಿಯಾಗಿ ಸೋಸಿ 10 ನಿಮಿಷ ಹಾಗೇ ಇಡಿ. ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ, ಅಗತ್ಯವಿದ್ದಲ್ಲಿ ಒಂದೆರಡು ಚಮಚ ನೀರು ಸೇರಿಸಬಹುದು. ರುಬ್ಬಿದ ಪೇಸ್ಟ್ ಅನ್ನು ಒಂದು ಬೌಲ್ ಗೆ ಹಾಕಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಉಪ್ಪು, ಇಂಗು ಹಾಕಿ ಚೆನ್ನಾಗಿ ಕಲಸಿ. ನಂತರ ಕೈಗೆ ಎಣ್ಣೆ ಸವರಿಕೊಂಡು ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ, ವಡೆಯ ಆಕಾರಕ್ಕೆ ತಟ್ಟಿ. ಅದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಬಿಸಿ ಬಿಸಿ ಗರಿ ಗರಿಯಾದ ಮಸಾಲಾ ವಡಾ ರೆಡಿ.