ಕಾಡು ಪ್ರಾಣಿಯು ರಸ್ತೆಯನ್ನು ದಾಟುತ್ತಿರುವುದನ್ನು ತೋರಿಸುವ ಸಾಕಷ್ಟು ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಸ್ವಲ್ಪ ಹೆಚ್ಚೂ ಕಡಿಮೆ ಆಗಿದ್ದರೂ ಇಬ್ಬರು ಬೈಕ್ ಸವಾರರ ಜೀವಕ್ಕೇ ಕುತ್ತಾಗುವಂಥದ್ದಾಗಿರುವ ಭಯಾನಕ ವಿಡಿಯೋ ಇದು.
ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಇದರಲ್ಲಿ ಹುಲಿಯೊಂದು ರಸ್ತೆ ದಾಟುತ್ತಿದೆ. ಆ ಸಂದರ್ಭದಲ್ಲಿ ಅಲ್ಲಿದ್ದ ವಾಹನದಿಂದ ಈ ಹುಲಿಯ ಚಿತ್ರ ಶೂಟ್ ಮಾಡಲಾಗುತ್ತಿದೆ. ಹುಲಿ ರಸ್ತೆ ದಾಟುತ್ತಿದ್ದುದರಿಂದ ಅವರು ಅಲ್ಲಿಯೇ ನಿಂತುಕೊಂಡಿದ್ದಾರೆ. ಆದರೆ ಬೈಕ್ನಲ್ಲಿ ಬಂದ ಸವಾರರು ಸುಮ್ಮನೇ ನಿಂತುಕೊಳ್ಳುವುದನ್ನು ಬಿಟ್ಟು ಮುಂದೆ ಹೋಗುವ ಸಾಹಸ ಮಾಡಿದ್ದಾರೆ.
ಅಲ್ಲಿ ರಸ್ತೆ ದಾಟುತ್ತಿದ್ದ ಹುಲಿ ಸಡನ್ ಆಗಿ ಬೈಕ್ನತ್ತ ನೋಡಿದಾಗ ಸವಾರ ಬೆಚ್ಚಿಬಿದ್ದಿದ್ದಾನೆ, ಬೈಕ್ ಅನ್ನು ಹಿಂದಕ್ಕೆ ತೆಗೆದುಕೊಂಡಿದ್ದಾನೆ. ಹುಲಿಯ ಮೂಡ್ ಚೆನ್ನಾಗಿತ್ತೇನೋ, ಸುಮ್ಮನೇ ಅತ್ತ ಕಡೆ ವಾಪಸ್ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಾಣಿಗಳು ರಸ್ತೆ ದಾಟುತ್ತಿರುವಾಗ ಹುಚ್ಚರಾಗಿ ವರ್ತಿಸಿದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಲವರು ಕಮೆಂಟ್ ಮೂಲಕ ಹೇಳಿದ್ದಾರೆ.